ದಾವಣಗೆರೆ: ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಘೋಷಣೆಯಿಂದ ಜಿಲ್ಲಾ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯ ಶಮನಗೊಳಿಸಿ, ಸಂಧಾನ ನಡೆಸುವಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಘೋಷಣೆಯಾಗಿರುವ ಅಭ್ಯರ್ಥಿ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿದ್ದಾರೆ.
ಇಂದು (ಮಾ.26) ನಗರದ ಖಾಸಗಿ ಹೋಟೆಲ್ ನಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣದ ನಡುವೆ ಸಂಧಾನ ನಡೆಸಿದರು. ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಜಿ. ಕರುಣಾಕರ ರೆಡ್ಡಿ, ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್. ಎನ್. ಕಲ್ಲಪ್ಪ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ದಾವಣಗೆರೆ ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಇಲ್ಲ. ಗಾಯತ್ರಿ ಸಿದ್ದೇಶ್ವರ್ ಅವರ ಸ್ಪರ್ಧೆ ಖಚಿತ. ಆದರೆ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಈ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಿಂದ ಅತಿ ಹೆಚ್ಚು ಮತಗಳಿಂದ ಗಾಯತ್ರಿ ಸಿದ್ದೇಶ್ವರ್ ಗೆಲ್ಲುತ್ತಾರೆ. ಯಾವುದೇ ಬಂಡಾಯವಿಲ್ಲ. ಎಲ್ಲವೂ ಶಮನ ಆಗಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಎರಡು ಗಂಟೆಗಳ ಕಾಲ ಎಲ್ಲರ ಭಾವನೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇವೆ. ಈಗಾಗಲೇ ಲೋಕಸಭಾ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಆಯ್ಕೆ ಮಾಡಿದ್ದೇವೆ. ಅವರ ಗೆಲುವಿಗೆ ಒಗ್ಗಟ್ಟಾಗಿ ಎಲ್ಲರೂ ಕೆಲಸ ಮಾಡಬೇಕು. ರವೀಂದ್ರನಾಥ್ ಅವರಿಗೆ ಚುನಾವಣೆ ನೇತೃತ್ವವನ್ನು ವಹಿಸಲಾಗಿದೆ. ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಲಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಒಡಕಿನ ಮಾತಿಗೆ ಅವಕಾಶ ಇಲ್ಲ. ಎಲ್ಲವೂ ಒಳ್ಳೆಯದಾಗಿದೆ. ಯಾವುದೇ ಷರತ್ತು ಇಲ್ಲದೆ, ಸರ್ವಾನುಮತದಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ರವೀಂದ್ರನಾಥ್ ಮಾತನಾಡಿ, ಸಣ್ಣ ಪುಟ್ಟ ದೋಷಗಳಿದ್ದವು, ಅವೆಲ್ಲವೂ ಸರಿ ಆಗಿದೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಎಲ್ಲ ರೀತಿಯ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಮಾತನಾಡದೆ ಇರುವುದರಿಂದ ಎಲ್ಲವೂ ಸಮಸ್ಯೆ ಆಗಿದ್ದವು. ಈಗ ಎಲ್ಲರೂ ಮಾತನಾಡಿದ್ದೇವೆ. ಹಾಗಾಗಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದರು.
ಸಭೆಯ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಆಗಲೇಬೇಕೆಂದು ರೇಣುಕಾಚಾರ್ಯ ಪಟ್ಟು ಹಿಡಿದರು. ರವೀಂದ್ರನಾಥ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು. ಆ ಬಳಿಕ ಯಡಿಯೂರಪ್ಪ ಅವರು, ದಾವಣಗೆರೆ ಮಧ್ಯಕರ್ನಾಟಕದ ಹೆಬ್ಬಾಗಿಲು. ದಾವಣಗೆರೆ ಜಿಲ್ಲೆಯಾದಾಗಿನಿಂದ ಬಿಜೆಪಿ ಸೋತಿಲ್ಲ. ಈ ಬಾರಿಯೂ ಸೋಲಬಾರದು. ಎಲ್ಲರೂ ಒಟ್ಟಾಗಿ ಗಾಯತ್ರಿ ಸಿದ್ದೇಶ್ವರ ಗೆಲುವಿಗೆ ಪ್ರಯತ್ನಿಸಬೇಕು. ಮತ್ತೆ ಬಿಜೆಪಿ ಭದ್ರಕೋಟೆ ಎಂಬುದು ಸಾಬೀತಾಗಬೇಕು. ಈ ಮೂಲಕ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.