ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವವು ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ತೋಳಹುಣಸೆಯಲ್ಲಿನ ಜ್ಞಾನಸೌಧ ಶಿವಗಂಗೋತ್ರಿ ಆವರಣದಲ್ಲಿ ನಡೆಯಲಿದೆ. ಈ ವೇಳೆ 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ; 14,357 ವಿದ್ಯಾರ್ಥಿಗಳಿಗೆ ಪದವಿ, 64 ಪಿಎಚ್.ಡಿ ಪ್ರದಾನ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದಾವಣಗೆರೆ ವಿ.ವಿ. ಕುಲಪತಿಗಳಾದ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವರಾದ ಪ್ರೊ.ರಮೇಶ.ಸಿ.ಕೆ, ಕುಲಸಚಿವರು(ಪ್ರಭಾರ) ಪ್ರೊ.ವೆಂಕಟರಾವ್.ಎಂ.ಪಲಾಟೆ ಭಾಗವಹಿಸುವರು.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,357 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. 45 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ, 64 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ (5 ಚಿನ್ನದ ಪದಕ) ಮತ್ತು ಸ್ನಾತಕ ಪದವಿಯಲ್ಲಿ ಹೊನ್ನಾಳಿಯ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿಂಧುಬಾಯಿ (3 ಚಿನ್ನದ ಪದಕ) ಅತ್ಯುತ್ತಮ ಸಾಧನೆ ಮಾಡಿ ಅತಿ ಹೆಚ್ಚು ಸ್ವರ್ಣ ಪದಕಗಳನ್ನು ಪಡೆದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಬಿಎ, ಬಿಕಾಂ, ಬಿಎಸ್ಸಿ, ಬಿಎಡ್, ಬಿಪಿಎಡ್, ಬಿವಿಎ ಸೇರಿದಂತೆ ಸ್ನಾತಕ ಪದವಿಯಲ್ಲಿ ಒಟ್ಟು 16,140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 12,265 ವಿದ್ಯಾರ್ಥಿಗಳು (ಶೇ.75.99) ಉತ್ತೀರ್ಣರಾಗಿದ್ದಾರೆ. ಇವರಲ್ಲಿ 4977 ಪುರುಷ ಮತ್ತು 7288 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಒಟ್ಟು 9 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದಿದ್ದರೆ, 12 ವಿದ್ಯಾರ್ಥಿಗಳು ಚಿನ್ನದ ಪಕದ ಗಳಿಸಿದ್ದಾರೆ. 20 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ವಿವರಿಸಿದರು.
ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 2177 ವಿದ್ಯಾರ್ಥಿಗಳು ಹಾಜರಾಗಿದ್ದು, 2092 ವಿದ್ಯಾರ್ಥಿಗಳು (ಶೇ.96.09) ತೇರ್ಗಡೆಯಾಗಿದ್ದಾರೆ. ಇವರಲ್ಲಿ 778 ವಿದ್ಯಾರ್ಥಿಗಳು ಮತ್ತು 1314 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಸ್ನಾತಕೋತ್ತರ ಪದವಿಗೆ ಭಾಜನರಾಗಿದ್ದಾರೆ. ಒಟ್ಟು 30 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಗಳಿಸಿದರೆ, 33 ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದಿದ್ದಾರೆ. 51 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರ‍್ಯಾಂಕ್ ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆಗೆ ಆದ್ಯತೆ ನೀಡಿದ್ದು, ಈ ಬಾರಿ ತಲಾ 32 ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ದಾಖಲೆಯ 64 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯಲಿದ್ದಾರೆ. ಆ ಮೂಲಕ ರಾಷ್ಟ್ರೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತೊಂದು ಸಾಧನೆಯನ್ನು ಮೆರೆಯಲು ಸಾಧ್ಯವಾಗಿದೆ ಎಂದು ಪ್ರೊ.ಕುಂಬಾರ ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ವೆಂಕಟರಾವ್ ಎಂ. ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಕೆ. ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ತಮ್ಮನಗೌಡ್ರ, ವಿವಿಧ ನಿಕಾಯಗಳ ಡೀನರಾದ ಪ್ರೊ. ಯು. ಎಸ್. ಮಹಾಬಲೇಶ್ವರ, ಪ್ರೊ. ಆರ್. ಶಶಿಧರ, ಪ್ರೊ. ಕೆ. ವೆಂಕಟೇಶ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.