ದಾವಣಗೆರೆ: ಈರುಳ್ಳಿ ಬೆಳೆಯಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸಿದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಜಗಳೂರು ತಾಲ್ಲೂಕು ನಿಬಗೂರು ಗ್ರಾಮದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡ ‘ಈರುಳ್ಳಿ ಬೆಳೆಯ ಕ್ಷೇತ್ರಪ್ರಯೋಗದ ಕ್ಷೇತ್ರೋತ್ಸವ’ ದಲ್ಲಿ ಭಾಗವಹಿಸಿ ಮಾತಾನಾಡಿದ ಅವರು, ಭೀಮಾ ರೆಡ್, ಭೀಮಾ ಶಕ್ತಿ ತಳಿಗಳನ್ನು ರೈತರಿಗೆ ಪರಿಚಯಿಸಲಾಗಿದ್ದು, ಬೆಳೆ ಉತ್ತಮವಾಗಿ ಬಂದಿದೆ. ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ರೋಗ ಮತ್ತು ಕೀಟಗಳ ನಿರ್ವಹಣೆ ಮಾಡಿರುವುದರಿಂದ ಗೆಡ್ಡೆ ಉತ್ತಮವಾಗಿ ಕಟ್ಟಿದೆ. ರೈತರು ಗಡ್ಡೆಗಳನ್ನು ವರ್ಗಿಕರಣ ಮಾಡಿ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗಲಿದೆ.ಮೂರು ತಳಿಗಳಲ್ಲಿ ಭೀಮಾ ರೆಡ್ ತಳಿಯು ಉತ್ತಮವಾಗಿ ಗಡ್ಡೆ ಕಟ್ಟಿದ್ದು, ಬೇಸಿಗೆಯಲ್ಲಿ ಬೆಳೆಯಲು ಶಿಫಾರಸ್ಸು ಮಾಡಬಹುದು ಎಂದರು.
ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ. ರವರು ಮಾತನಾಡಿ, ಬಿದರಕರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯಿಂದ ರೈತರಿಗೆ ಉತ್ತಮ ದರದಲ್ಲಿ ಬೀಜ ಮತ್ತು ಗೊಬ್ಬರಗಳನ್ನು ರೈತರಿಗೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ರೈತ ಉತ್ಪಾದಕ ಕಂಪನಿಯ ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕ ರೇವಣ್ಣ, ಕೃಷ್ಣಮೂರ್ತಿ, ಬಸವನಗೌಡ್ರು, ಸಿಬ್ಬಂದಿ ವರ್ಗದ ಆದರ್ಶ್, ಸುರೇಶ್, ರೈತರಾದ ನಾಗರಾಜ, ಗುರುಸಿದ್ದನಗೌಡ ಹಾಗೂ ಇತರರು ಹಾಜರಿದ್ದರು.



