ಬೆಂಗಳೂರು: ಗ್ಯಾರಂಟಿ ಯೋಜನೆಯ ಆರ್ಥಿಕ ಹೊರೆಯ ನಡುವೆಯೂ ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ಕೂಡಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಾನು ಸರ್ಕಾರಿ ನೌಕರರ ಪರಸರ್ಕಾರಿ ನೌಕರರ ಸಮಸ್ಯೆಗಳನ್ನು ಅರಿತು 7ನೇ ವೇತನ ಆಯೋಗ ರಚಿಸಲಾಗಿದ್ದು, 6ನೇ ವೇತನ ಆಯೋಗವನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. 7 ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ 17% ಹೆಚ್ಚಳ ಮಾಡಲಾಗಿತ್ತು. ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷರು ಕೋರಿದ್ದು, ಮಾರ್ಚ್ 15 ರವರೆಗೆ ವರದಿ ನೀಡಲು ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ , ಆಯೋಗದ ಅಂತಿಮ ವರದಿಯನ್ನು ಆದಷ್ಟು ಬೇಗ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 7.50 ಲಕ್ಷ ಮಂಜೂರಾಗಿರುವ ಹುದ್ದೆಗಳಿವೆ. 7 ಲಕ್ಷ ಜನ 7 ಕೋಟಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ, ರಾಜ್ಯದ ಅಭಿವೃದ್ಧಿಯಲ್ಲಿ ಬಾಗಿಯಾಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಕೇಂದ್ರ ಸರ್ಕಾರ ನಿರ್ಧರಿಸಿದಂತೆ ತುಟ್ಟಿಭತ್ಯೆಯನ್ನು ಯಾವುದೇ ವಿಳಂಬವಿಲ್ಲದೇ ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು.
ಎನ್ ಪಿ ಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆಯೂ ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದರು.



