ಹ್ಯಾಮಿಲ್ಟನ್: ಸೂಪರ್ ಓವರಿನ ಕೊನೆಯ ಎರಡು ಎಸೆತದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಸೂಪರ್ ಸಿಕ್ಸರ್ ಸಿಡಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ಇದರೊಂದಿಗೆ ಟೀಮ್ ಇಂಡಿಯಾ ವಿಶ್ವ ಕಪ್ ಸಮಿ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿತು.
5 ಪಂದ್ಯಗಳ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ 3-0 ರಿಂದ ಸರಣೆ ಜಯ ಸಾಧಿಸಿದೆ. ಈ ರೋಚಕ ಪಂದ್ಯದೊಂದಿಗೆ ಸರಣಿ ಗೆದ್ದು ನ್ಯೂಜಿಲೆಂಡಿನಲ್ಲಿ ಇತಿಹಾಸ ನಿರ್ಮಿಸಿದೆ.

ಗೆಲ್ಲಲು 180 ರನ್ ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 179 ರನ್ ಗಳಿಸಿದ ಪರಿಣಾಮ ಪಂದ್ಯ ಟೈ ಆಯ್ತು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯ್ತು.
ಬುಮ್ರಾ ಎಸೆದ ಸೂಪರ್ ಓವರಿನಲ್ಲಿ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ 17 ರನ್ ಹೊಡೆದರು. ಈ ಓವರಿನಲ್ಲಿ ಬುಮ್ರಾ ಓವರ್ ನಲ್ಲಿ 1,1,6,4,1,4 ರನ್ ಬಿಟ್ಟುಕೊಟ್ಟರು.
ಭಾರತದ ಪರ ಸೂಪರ್ ಓವರ್ ಆಡಲು ರೋಹಿತ್ ಶರ್ಮಾ ಮತ್ತು ರಾಹುಲ್ ಕ್ರೀಸ್‍ಗೆ ಆಗಮಿಸಿದರು. ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿದ್ದ ವೇಳೆ ರೋಹಿತ್ ಶರ್ಮಾ ರನ್ ಔಟ್ ಆಗುವ ಸಾಧ್ಯತೆಯಿತ್ತು. ಕೀಪರ್ ಕೈ ಸೇರಿ ಬಾಲ್ ಕೆಳಗಡೆ ಬಿದ್ದ ಪರಿಣಾಮ ರೋಹಿತ್ ಶರ್ಮಾ ಪಾರಾದರು.
ಎರಡನೇ ಎಸೆತದಲ್ಲಿ ಒಂದು ರನ್ ಬಂದರೆ ಮೂರನೇ ಎಸೆತವನ್ನು ರಾಹುಲ್ ಬೌಂಡರಿಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ 11 ರನ್ ಬೇಕಿದ್ದಾಗ ನಾಲ್ಕನೇಯ ಎಸೆತದಲ್ಲಿ ರಾಹುಲ್ 1 ರನ್ ಮಾತ್ರ ಹೊಡೆದರು.
ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿತ್ತು. ಸಿಕ್ಸ್ ಹೊಡೆಯುವ ಅನಿವಾರ್ಯತೆ ಇದ್ದಾಗ ರೋಹಿತ್ ಶರ್ಮಾ 5ನೇ ಎಸೆತವನ್ನು ಲೆಬ್ ಸ್ಟೆಂಪ್ ನಲ್ಲಿ ಸಿಕ್ಸ್ ಎತ್ತಿದರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೊನೆಯ ಎಸೆತವನ್ನು ಸೂಪರ್ ಆಫ್ ಸೈಡ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟರು. 65 ರನ್ ಜೊತೆಗೆ 15 ರನ್ ಹೊಡೆದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ಕೊನೆಯ ಓವರ್ ನಲ್ಲಿ 9 ರನ್ ಅಗತ್ಯವಿದ್ದಾಗ ರಾಸ್ ಟೇಲರ್ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬಳಿಕ ಒಂಟಿ ರನ್ ಗಳಿಸಿದರು. ಆದರೆ 3ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಕೇನ್ ವಿಲಿಯಮ್ಸನ್ ವಿಕೆಟ್ ಕಿತ್ತಿದ್ದು ಪಂದ್ಯಕ್ಕೆ ಭರ್ಜರಿ ಟ್ವಿಸ್ಟ್ ನೀಡಿತು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಐದನೇ ಎಸೆತದಲ್ಲಿ ಸೀಫರ್ಟ್ ಬೈ ಮೂಲಕ ಒಂದು ರನ್ ಓಡಿದರು. ಕೊನೆಯ ಒಂದು ಎಸೆತಕ್ಕೆ ಒಂದು ರನ್ ಅಗತ್ಯವಿತ್ತು. ಶಮಿ ಎಸೆದ ಕೊನೆಯ ಬಾಲ್ ಟೇಲರ್ ಬ್ಯಾಟ್ ಗೆ ತಗುಲಿ ನೇರವಾಗಿ ವಿಕೆಟಿಗೆ ಬಡಿದ ಪರಿಣಾಮ ಪಂದ್ಯ ಟೈ ಆಯ್ತು. ಆಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು.
