ದಾವಣಗೆರೆ: ಇಡೀ ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದೆ. ಹನಿ, ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರದ ಹೊತ್ತಿನಲ್ಲಿಯೇ ಗಂಗಾದೇವಿ ಗಗನಕ್ಕೆ ಚಿಮ್ಮಿದ್ದಾಳೆ. ದಾವಣಗೆರೆ ತಾಲೂಕಿನ ಗುಮ್ಮನೂರ ಗ್ರಾಮದಲ್ಲಿ ಗ್ರಾ.ಪಂ. ವತಿಯಿಂದ ಕುಡಿಯುವ ನೀರಿಗೆ ಕೊರೆಸಿದ ಬೋರ್ವೆಲ್ ನಲ್ಲಿ ಒಮ್ಮೆಲೇ ನೀರು ಆಕಾಶಕ್ಕೆ ಚಿಮ್ಮಿದೆ.
ಕುಡಿಯುವ ನೀರಿನ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಗುಮ್ಮನೂರು ಗ್ರಾಮ ಪಂಚಾಯಿತಿ ಬೊರ್ವೆಲ್ ಕೊರೆಸಲು ತೀರ್ಮಾನಿಸಿತ್ತು. ಆಗ, 589 ಅಡಿಗೆ 6 ಇಂಚು ನೀರು ಉಕ್ಕಿದೆ. ಒಮ್ಮೆಲೇ ನೀರು ಕಂಡ ಊರಿನ ಜನ ಹರ್ಷಗೊಂಡಿದ್ದಾರೆ. ಸಮರ್ಪಕ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ಮೂಲಗಳು ಬರಿದಾಗುತ್ತಿವೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಎಷ್ಟೇ ಬೋರ್ವೆಲ್ಗಳಲ್ಲಿ ನೀರು ಬೀಳುತ್ತಿಲ್ಲ.
ಈ ಪ್ರದೇಶದಲ್ಲಿ ಒಂದು ಸಾವಿರ ಅಡಿ ಬೋರ್ವೆಲ್ ಕೊರೆಸಿದರೂ ನೀರು ಸಿಗುವುದಿಲ್ಲ. ಹೀಗಾಗಿ ಈ ಬೋರ್ವೆಲ್ ನಲ್ಲಿ ಉಕ್ಕಿದ ನೀರು ಕಂಡು ಜನರಿಗೆ ಒಂದೆಡೆ ಅಚ್ಚರಿಯಾದ್ರೆ, ಮತ್ತೊಂದೆಡೆ ಸಂತಸ ತಂದಿದೆ. 589 ಅಡಿಗೆ ನೀರು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಖುಷಿಗೆ ಕಾರಣವಾಗಿದೆ.



