ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯ ನಗರದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರಾ ಮಹೋತ್ಸವವು ಮಾ.1 ರಿಂದ ಆರಂಭಗೊಳ್ಳಿದ್ದು, ಇಂದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ದುರ್ಗಾಂಬಿಕ ದೇವಸ್ಥಾನದ ಮುಂಭಾಗದ ಮಹಾ ಮಂಟಪದದಲ್ಲಿ ಹಂದರಗಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ದುರ್ಗಾಂಬಿಕ ದೇವಸ್ಥನ ಟ್ರಸ್ಟ್ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಟ್ರಸ್ಟಿ ಗೌಡ್ರು ಚನ್ನಬಸಪ್ಪ ಸೇರಿದಂತೆ ಅನೇಕ ಹಿರಿಯರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಾ1 ರಿಂದ 4ರವರೆಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಈ ಜಾತ್ರಾ ಮಹೋತ್ಸವ ಪೂರ್ವಭಾವಿಯಾಗಿ ಹಂದರಕಂಬ ಪೂಜೆಯನ್ನು ನೆರವೇರಿಸಲಾಯಿತು. ಆರಂಭದಲ್ಲಿ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ದುರ್ಗಾಂಬಿಕೆ ದೇವಿಗೆ ಉಡಿ ತುಂಬಿಸಲಾಯಿತು. ಭಕ್ತರು ಹಂದರಗಂಬಕ್ಕೆ ಕುಂಕುಮ ಹಚ್ಚಿ ಅಕ್ಷತೆ ಹಾಕಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಹಂದರಗಂಬ ಪೂಜೆ ನಂತರ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ದುರ್ಗಾಂಬಿಕ ದೇವಿ ಜಾತ್ರೆಯನ್ನು 4 ವರ್ಷ , ಇಲ್ಲವೇ 5 ವರ್ಷಕ್ಕೊಮ್ಮೆ ನಡೆಸಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಎಲ್ಲಾ ಟ್ರಸ್ಟ್ ನ ಎಲ್ಲಾ ಧರ್ಮದರ್ಶಿಗಳ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗೆಯೇ ಈ ಬಾರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ಮಾ.1 ರಂದು ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ, ಸಾರು ಹಾಕುವುದು, ಮಾ.2 ರಂದು ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಮಾ.3 ರಂದು ರಾತ್ರಿ ಭಕ್ತಿ ಸಮರ್ಪಣೆ, ಮಾ.4 ರಂದು ಚರಗಚೆಲ್ಲುವ ಕಾರ್ಯಕ್ರಮ ಜರುಗಲಿದೆ.
ಜಾತ್ರೆಯ ಅಂಗವಾಗಿ ಮಾರ್ಚ್ 5 ರಿಂದ 7ರವರೆಗೆ ಮೂರು ದಿನ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕುಸ್ತಿ ಅಖಾಡ ನಡೆಯಲಿದೆ ಎಂದು ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಯಜಮಾನ ಮೋತಿ ವೀರಪ್ಪ, ಯಶವಂತ್ ಜಾದವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ, ಜ.ಕೆ ಕೊಟ್ರಬಸಪ್ಪ, ಮಾಜಿ ಮೇಯರ್ ಎಚ್. ಬಿ. ಗೋಣೆಪ್ಪ, ಲಲಿತ ರಮೇಶ್, ಬಿ.ಎಚ್. ವೀರಭದ್ರಪ್ಪ ಸೇರಿದಂತೆ ಅನೇಕ ಅಣ್ಯರು ಉಪಸ್ಥಿತರಿದ್ದರು.