ದಾವಣಗೆರೆ: ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಮಹಾನಗರ ಪಾಲಿಕೆಯ ಸ್ಟ್ರಾಂಗ್ ರೂಮ್ ಬಳಿ ನಡೆದಿದೆ. ಕಾನ್ ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಲಾಗಿದೆ.
ಮಹಾ ನಗರ ಪಾಲಿಕೆ ಇವಿಎಂ ಕೊಠಡಿಯ ಭದ್ರತಾ ಕರ್ತವ್ಯ ನಿರತ ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ನಿವಾಸಿ ಗುರುಮೂರ್ತಿ (34) ಆತ್ಮಹತ್ಯೆಗೆ ಯತ್ನಿದ ಪೊಲೀಸ್ ಪೇದೆ. ಎಂದಿನಂತೆ ಪಾಲಿಕೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಕೊಠಡಿಯ ಭದ್ರತಾ ಕಾರ್ಯಕ್ಕೆ ಹಾಜರಾಗಿದ್ದ ಕಾನ್ ಸ್ಟೇಬಲ್ ಗುರುಮೂರ್ತಿ ಮೊಬೈಲ್‌ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ, ಬೆನ್ನಿನ ಭಾಗ ತೀವ್ರ ಹಾನಿಯಾಗಿದೆ.
ಪಾಲಿಕೆಯಲ್ಲಿ ಗುಂಡಿನ ಸದ್ದು ಕೇಳಿದ ತಕ್ಷಣ ಅಲ್ಲಿದ್ದವರು ಓಡಿ ಬಂದಿದ್ದಾರೆ. ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದ ಗುರುಮೂರ್ತಿಯನ್ನ ಕೂಡಲೇ ಸಿಟಿ ಸೆಂಟ್ರಲ್ ಆಸ್ಪತ್ತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಕಳೆದ ಕೆಲ ದಿನಗಳಿಂದ ಇವಿಎಂ ಮಷಿನ್ ಕಾವಲು ಸೇವೆಯಲ್ಲಿದ್ದ ಗುರುಮೂರ್ತಿ, ಇದೀಗ ಏಕಾಎಕಿ ಆತ್ಮಹತ್ಯೆಗೆ ಯತ್ನಿಸಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.