ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಳೆದ 15 ದಿನದಿಂದಲೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರನ್ನು ಭೇಟಿ ಮಾಡಿದರು. ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ನಗರದಲ್ಲಿ ದಿನದಿನಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಕೆಲವು ವಾರ್ಡ್ ಗಳಿಗೆ ಏಳೆಂಟು ದಿನಕ್ಕೊಮ್ಮೆ ನೀರು ಪೂರೈಸಿದರೆ, ಮತ್ತೆ ಕೆಲ ವಾರ್ಡ್‌ಗಳಿಗೆ 10-11 ದಿನಗಳಾದರೂ ಕುಡಿಯುವ ನೀರು ಪೂರೈಸಿಲ್ಲ. ಇದರಿಂದ ಎಲ್ಲಾ ಕುಟುಂಬಗಳಿಗೂ ತೊಂದರೆಯಾಗುತ್ತಿದೆ ಎಂದರು.
ತಾಲೂಕಿನ ಬಾತಿ ಗ್ರಾಮದ ಪಂಪ್‌ಹೌಸ್‌ಗೆ ನಿರಂತರ ವಿದ್ಯುತ್ ಪೂರೈಕೆಯಾಗದ ಕಾರಣ ದಿನದಿನಕ್ಕೂ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದಿನವೊಂದಕ್ಕೆ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು, ನಿರಂತರವಾಗಿ ಪಂಪ್ ಹೌಸ್‌ಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದರಿಂದ ಪಾಲಿಕೆಯಿಂದ ಸಮರ್ಪಕ ನೀರು ಪೂರೈಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಈ ಹಿಂದೆ ಕಾರ್ಯಾದೇಶ ನೀಡಿದ್ದು, ಹರಿಹರದ ವಿದ್ಯಾನಗರದ ಸಬ್ ಸ್ಟೇಷನ್‌ನಿಂದ ಬಾತಿ ಗ್ರಾಮದ ಪಂಪ್ ಹೌಸ್‌ವರೆಗೆ ಹಾಗೂ ಕೋಡಿಯಾಲ ಹೊಸಪೇಟೆಯಿಂದ ಹರಿಹರ ತಾ. ರಾಜನಹಳ್ಳಿ ಪಂಪ್‌ಹೌಸ್‌ವರೆಗೆ ಎಕ್ಸಪ್ರೆಸ್ ವಿದ್ಯುತ್ ಮಾರ್ಗದ ಫೀಡರ್ ಅಳವಡಿಸುವ ಕಾಮಗಾರಿಯನ್ನೇ ನಿಲ್ಲಿಸಲಾಗಿದೆ. ಈ ಸಮಸ್ಯೆಯನ್ನೂ ಜಿಲ್ಲಾಧಿಕಾರಿಗಳು ಪ್ರಥಮಾದ್ಯತೆ ಮೇಲೆ ಪರಿಹರಿಸಿ, ಸಮರ್ಪಕ ನೀರೊದಗಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.



