ದಾವಣಗೆರೆ: ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುವುದು. ಹಾಗೆಯೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಡಾ.ಪ್ರಭಾ ಸ್ಪರ್ಧೆ ಮಾಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ನಗರದ ಜೆಜೆಎಂ ಕಾಲೇಜಿನ ನೂತನ ಸಭಾಂಗಣದಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀವ್ರ ಬರ ಹಿನ್ನೆಲೆ ಜಿಲ್ಲೆಗೆ ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗೆ ಹೆಚ್ಚಿನ ಅನುದಾನ ಅಗತ್ಯವಿದೆ ಎಂದರು. ಭದ್ರಾ ಕಾಡಾ ಸಮಿತಿ ಸಭೆ ನಿಗದಿಯಾಗಿದ್ದ ದಿನ ನಾನು ಹೊರ ರಾಜ್ಯದಲ್ಲಿ ಇದ್ದುದರಿಂದ ಸಭೆಗೆ ಹೋಗಿರಲಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಜಿಲ್ಲೆಯ ಅಚ್ಚುಕಟ್ಟು ರೈತರ ಹಿತ ಕಾಯಲು ಬದ್ಧರಿದ್ದೇವೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್, ನೀರಾವರಿ, ಬೆಸ್ಕಾಂ ಸೇರಿ ಎಲ್ಲಾ ಅಧಿಕಾರಿಗಳಿಗೆ ಭದ್ರಾ ನಾಲೆಯಲ್ಲಿ ನಿಗದಿತ ಪ್ರಮಾಣದ ನೀರು ಹರಿಯಬೇಕು. ಅಚ್ಚುಕಟ್ಟು ಕಡೆಯ ಭಾಗಕ್ಕೂ ನೀರು ತಲುಪಿಸಲು ಏನೆಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುವಂತೆ ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿ ನಿಲಯಗಳನ್ನು ಪ್ರತಿ ತಾಲೂಕಿನಲ್ಲಿ ಸ್ಥಾಪಿಸಲು ಅಗತ್ಯ ಜಮೀನು ನೀಡಿ, ಹಾಸ್ಟೆಲ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಸಂಖ್ಯೆ ಒಂದು ವೇಳೆ ಹೆಚ್ಚಾದರೆ, ಹಾಸ್ಟೆಲ್ಗಳಲ್ಲಿ ಸೀಟುಗಳು ಇಲ್ಲದಿದ್ದರೂ ಯಾವುದೇ ವಿದ್ಯಾರ್ಥಿಗಳಿಗೆ ಇಲ್ಲವೆಂದು ಹೇಳುವಂತಿಲ್ಲ. ಬಾಡಿಗೆ ಕಟ್ಟಡದಲ್ಲಾದರೂ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಶಿಕ್ಷಣಕ್ಕೆ ನಮ್ಮ ಆದ್ಯತೆ ಎಂದು ತಿಳಿಸಿದರು.
ಜನತಾ ದರ್ಶನಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಲ್ಕೈದು ಅರ್ಜಿಗಳ ಹೊರತುಪಡಿಸಿದರೆ, ಉಳಿದೆಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಶೀಘ್ರವೇ ಮತ್ತೆ ಜನತಾ ದರ್ಶನ ಆಯೋಜಿಸಲು ಸ್ಥಳ, ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ರಿಗೆ ಸೂಚನೆ ನೀಡಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಕಳಪೆ ಬಗ್ಗೆ ಆರೋಪ ಹಿನ್ನೆಲೆಯಲ್ಲಿ ಎಲ್ಲಾ ಕಾಮಗಾರಿಗಳ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಹಿಂದಿನ 5 ವರ್ಷದಲ್ಲಿ ಬಿಜೆಪಿಯವರು ನಾವು ಮಾಡಿದ್ದ ಯೋಜನೆಗಳೆಲ್ಲ ಕೆಡಿಸಿದ್ದಾರೆ. ಅದನ್ನು ಸರಿಪಡಿಸಲು ಕನಿಷ್ಠ 2 ವರ್ಷ ಬೇಕು. ಬಿಜೆಪಿ ಕೈಗೊಂಡ ಕಾಮಗಾರಿಗಳಲ್ಲಿ ಕೆಲ ಕಳಪೆಯಾಗಿದ್ದರೆ, ಮತ್ತೆ ಕೆಲವು ಅವೈಜ್ಞಾನಿಕವಾಗಿದೆ. ಹಿಂದೆ ಖಾಸಗಿ ಬಸ್ ನಿಲ್ದಾಣಕ್ಕೆ ವ್ಯವಸ್ಥಿತ ಪ್ಲಾನ್ ಮಾಡಿದ್ದೆವು. ಬಿಜೆಪಿಯವರು ಮಾಡಿದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ತಿರುಗಿಸಲೂ ಜಾಗವಿಲ್ಲ ಎಂದರು.
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ; ಸರ್ಕಾರ ಹೊಸ ಮರಳು ನೀತಿ ಜಾರಿ ಮಾಡಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಗಣಿಗಾರಿಕೆಯಿಂದ ಕಳೆದ ವರ್ಷ 6 ಸಾವಿರ ಕೋಟಿ ರೂ.ಆದಾಯ ಬಂದಿತ್ತು. ಈ ವರ್ಷ 9 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸಲಾಗಿದೆ ಎಂದರು.
ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅಕ್ರಮ ಗಣಿಗಾರಿಕೆ ನಿಯಂತ್ರಣ ತರಲಾಗುತ್ತಿದೆ. ಸುಧಾರಣೆಯ ನಿಟ್ಟಿನಲ್ಲಿ ವೇಗವಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ, ಇರುವ ಕೆಲ ತೊಡಕು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಗ್ರಾನೈಟ್ ಉತ್ಪಾದನೆ ಕ್ಷೀಣಿಸಿದೆ. ಹೀಗಾಗಿ ಚೀನಾಗೆ ರಫ್ತಾಗುತ್ತಿಲ್ಲ, ಸದ್ಯದಲ್ಲೇ ಮತ್ತೆ ಉತ್ಪಾದನೆ ಆರಂಭಿಸಲಾಗುವುದು ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಡಾ.ಪ್ರಭಾ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕಾಂಗ್ರೆಸ್ ಪಕ್ಷವೆಂದರೆ ಒಂದು ದೊಡ್ಡ ಸಂಸಾರವಿದ್ದಂತೆ. ಯಾವುದೇ ವಿಚಾರವಿದ್ದರೂ ಚರ್ಚಿಸಿ, ಸೂಕ್ತ ಅಭ್ಯರ್ಥಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.