ಬೆಂಗಳೂರು: 2006 ಏ.4ಕ್ಕಿಂತ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಿ, ತಾಂತ್ರಿಕ ಕಾರಣಗಳಿಂದ ನೇಮಕಾತಿ ವಿಳಂಬವಾಗಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಮತ್ತೆ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (Old Pension Scheme) ಸೇರಿಸಿ ಆದೇಶ ಹೊರಡಿಸಿದೆ. ಒಪಿಎಸ್ ಯೋಜನೆಯನ್ನು 2006 ನಂತರ ಸೇರಿದ ಎಲ್ಲಾ ನೌಕರರಿಗೂ ಜಾರಿಗೆ ತರಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಸಂಘದ ಆಗ್ರಹವಾಗಿತ್ತು. ಆದರೆ, ರಾಜ್ಯ ಸರ್ಕಾರ 11,366 ನೌಕರರನ್ನು ಸೇರಿಸಿ ಆದೇಶಿಸಿದೆ.
ಏ.1, 2006ರಕ್ಕಿಂತ ಮೊದಲು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ, ನಂತರ ಇತರೆ ಇಲಾಖೆಯ ಬೇರೆ ಹುದ್ದೆಗಳಿಗೆ ಮರು ಆಯ್ಕೆಯಾದವರೂ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ.ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಜಾರಿಗೂ ಮೊದಲು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ 2023 ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದೇಶದಂತೆ ಕ್ರಮ ಕೈಗೊಳ್ಳಲು ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಕೇಂದ್ರದ ಆದೇಶದಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್ ವ್ಯಾಪ್ತಿಗೆ ತಂದಿತ್ತು. ಈಗ ಇತರೆ ನೌಕರರನ್ನೂ ಒಪಿಎಸ್ ಯೋಜನೆಗೆ ಒಳಪಡಿಸಿದೆ.
ಹಳೇ ಪಿಂಚಣಿ ಯೋಜನೆಗೆ ಒಳಪಟ್ಟ ನೌಕರರು ಜೂನ್ 30ರ ಒಳಗೆ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮ ಅಭಿಪ್ರಾಯ ಸಲ್ಲಿಸಬೇಕು. ಎರಡು ಪಿಂಚಣಿ ಯೋಜನೆಯಲ್ಲಿ ತಾವು ಇಚ್ಚಿಸಿದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆಯ ಅಭಿಪ್ರಾಯ ಸಲ್ಲಿಸದವರು ಈಗ ಇರುವ ಎನ್‌ಪಿಎಸ್‌ನಲ್ಲೇ ಮುಂದುವರಿಯುತ್ತಾರೆ. ಇಲಾಖಾ ಮುಖ್ಯಸ್ಥರು ಅರ್ಹ ನೌಕರರ ಪಟ್ಟಿಯನ್ನು ಆ.31ರ ಒಳಗೆ ಆರ್ಥಿಕ ಇಲಾಖೆಯ ಅನುಮೋದನೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಎಲ್ಲ ಸರ್ಕಾರಿ ನೌಕರರನ್ನೂ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.



