ಬೆಂಗಳೂರು: ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ ಮಾಡಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್ ನೀಡುವ ಮಾನದಂಡವನ್ನು 10 ಯೂನಿಟ್ ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ.
ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ , ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿತ್ತು. ಇದರನ್ವಯ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
20 ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕನಿಗೆ ಹೆಚ್ಚುವರಿ 10% ರಷ್ಟು ಅಂದರೆ ಕೇವಲ 2 ಯೂನಿಟ್ ಮಾತ್ರ ಹೆಚ್ಚುವರಿ ಸಿಗುತ್ತಿತ್ತು. ಈಗ 10 ಯೂನಿಟ್ ಕೊಡುವುದರಿಂದ 20+10 ಸೇರಿ 30 ಯೂನಿಟ್ ವಿದ್ಯುತ್ ಆಗಲಿದೆ.



