ದಾವಣಗೆರೆ: ಜಿಲ್ಲಾ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಎನ್ ರಾಜಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ದಾವಣಗೆರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಉತ್ಸಾಹಿ ಯುವಕ, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಎನ್.ರಾಜಶೇಖರ್ ಪಕ್ಷ ಸೇವೆ ಗುರುತಿಸಿ, ಅವಕಾಶ ನೀಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ43ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಈ ಪೈಕಿಶಾಸಕರು, ಮುಖಂಡರು ಸಹ ಆಕಾಂಕ್ಷಿ ಆಗಿದ್ದರು. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಆರ್ ಎಸ್ ಎಸ್, ಹಿಂದೂ ಪರ ಸಂಘಟನೆಗಳಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಎನ್.ರಾಜಶೇಖರ್ ಗೆ ನೂತನ ಜವಾಬ್ದಾರಿ ದೊರೆತಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಜಿಲ್ಲಾಧ್ಯಕ್ಷರ ಹೆಸರು ಘೋಷಣೆ ಮಾಡಿದ್ದಾರೆ. ಬಹುತೇಕ ಜಿಲ್ಲೆಗಳ ನೂತನ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಸನ್ನದ್ಧರಾಗುವಂತೆ ಸೂಚನೆ ಕೊಟ್ಟಿದ್ದಾರೆ. ದಾವಣಗೆರೆ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹಲವು ಹೆಸರು ಕೇಳಿ ಬಂದಿದ್ದವು. ಈ ಪೈಕಿ ರಾಜಶೇಖರ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆರ್ ಎಸ್ ಎಸ್ ಕಡೆಯಿಂದ ರಾಜಶೇಖರ್ ಹೆಸರಿತ್ತು.
ಶಾಸಕ ಬಿ. ಪಿ. ಹರೀಶ್, ಮಾಜಿ ಶಾಸಕ ರೇಣುಕಾಚಾರ್ಯ, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಬಿ. ಎಸ್. ಜಗದೀಶ್ ಹಾಗೂ ಶ್ರೀನಿವಾಸ್ ದಾಸಕರಿಯಪ್ಪ ಹೆಸರು ಸಹ ಬಂದಿದ್ದವು. ಅಂತಿಮವಾಗಿ ರಾಜಶೇಖರ್ ಅವರನ್ನು ಆಯ್ಕೆ ಮಾಡುವಲ್ಲಿ ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ.



