ಬೆಂಗಳೂರು: ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ ಮನೆ ಬಾಗಿಲಲ್ಲೇ 72 ಸರ್ಕಾರಿ ಸೇವೆಗಳು ಸಿಗಲಿವೆ. ಪ್ರಸ್ತುತ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸೇವೆಗಳನ್ನು ಸೇರಿಸಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ ಸೂರಿನಡಿ ಮಹತ್ವದ 72 ಸೇವೆಗಳು ಲಭ್ಯವಿರಲಿದೆ.
ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮೀಣ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸರ್ಕಾರದ ಹಲವು ಸೇವೆಗಳನ್ನು ಗ್ರಾಮ ಪಂಚಾಯತಿಗಳಲ್ಲಿಯೇ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.
ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಪತ್ರ , ಆಧಾರ್ ಸೇವೆಗಳು ಸೇರಿದಂತೆ ಈಗಾಗಲೇ ಒದಗಿಸುತ್ತಿರುವ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸೇವೆಗಳನ್ನು ಸೇರಿಸಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ ಸೂರಿನಡಿ ಮಹತ್ವದ 72 ಸೇವೆಗಳು ಜನರಿಗೆ ಲಭ್ಯವಿರಲಿದೆ. ಸರ್ಕಾರದ ಸೇವೆಗಳನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಪಡೆಯುವುದಕ್ಕೆ ಈ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.