ದಾವಣಗೆರೆ: ಪ್ರೀತಿಸಿದ ಜೋಡಿಯೊಂದು ಕೇವಲ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಆದರೆ, ವಿವಾಹವಾಗಿ ಸ್ವಲ್ಪ ದಿನದಲ್ಲಿಯೇ ಗಂಡ-ಹೆಂಡತಿ ಮಧ್ಯೆ ಮನಸ್ತಾಪವಾಗಿ ಜಗಳವಾಗುತ್ತಿತ್ತು. ಆದರೆ, ತವರು ಮನೆಯಿಂದ ಹೆಂಡತಿ ಕರೆದುಕೊಂಡು ಬರುವಾಗ ಪತ್ನಿಯನ್ನೇ ಕೊಂದು, ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಕರೆ ಮಾಡಿ ತಿಳಿದ ಪತಿ ಆಸ್ಪತ್ರೆ ಸೇರಿದ್ದನು. ತವರು ಮನೆಯವರ ದೂರಿನ ಅನ್ವಯ ತನಿಖೆಯಲ್ಲಿ ಇದು ಅಪಘಾತವಲ್ಲ, ಕೊಲೆ ಎಂಬುದು ಗೊತ್ತಾಗಿದೆ. ಪ್ರೀತಿ ಮದುವೆಯಾದ ಪತ್ನಿಯನ್ನೇ ಕೊಂದ ಪತಿ, ಈಗ ಜೈಲಿನ ಅತಿಥಿಯಾಗಿದ್ದಾನೆ.
ಈ ಘಟನೆ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪಘಾತವಾಗಿ ಯಶೋಧಾ ಎಂಬ ವಿವಾಹಿತ ಮಹಿಳೆ ಮೃತಪಟ್ಟು ಈಕೆಯ ಪತಿ ಬೈಕ್ ಸವಾರ ತಿಪ್ಪೇಶನಿಗೆ ಗಾಯಗಳಾದ್ದರಿಂದ ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಮೃತ ಮಹಿಳೆಯ ತಂದೆ ಚಂದ್ರಪ್ಪ ಇದು, ಅಪಘಾತವಲ್ಲ ಇದೊಂದು ಕೊಲೆ ಎಂದು ಶಂಕಿಸಿ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಮೃತಮಹಿಳೆಯ ಪತಿ ತಿಪ್ಪೇಶನ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ, ಪ್ರಕರಣ ದಾಖಲಿಸಿ ಆರೋಪಿಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ನಿರಂಜನ್ ತಿಳಿಸಿದ್ದಾರೆ.
ಮೃತ ಮಹಿಳೆ ತಾಲೂಕಿನ ಸಾರಥಿ- ಹೊಸೂರು ಗ್ರಾಮದವರಾಗಿದ್ದು, ದಾವಣಗೆರೆ ತಾಲೂಕು ನರಗನಹಳ್ಳಿ ಗ್ರಾಮದ ತಿಪ್ಪೇಶ ಎಂಬಾತ ಪ್ರೀತಿಸಿ ಮನೆಯವರಿಗೂ ಹೇಳದೆ ಕಳೆದ 6 ತಿಂಗಳ ಹಿಂದೆಯಷ್ಟೇ ವಿವಾಹ ಮಾಡಿಕೊಂಡಿದ್ದಳು. ಪತಿ-ಪತ್ನಿಯರ ಮಧ್ಯೆ ಮನಸ್ತಾಪದಿಂದ ಜಗಳವಾಡುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.4ರಂದು ತಿಪ್ಪೇಶ ಮತ್ತು ಮಗಳು ಯಶೋಧಾ ದ್ವಿಚಕ್ರ ವಾಹನದಲ್ಲಿ ನನ್ನ ಮನೆಗೆ ಬಂದಿದ್ದರು ಮನೆಯಲ್ಲಿ ಟೀ ಕುಡಿದು ನಂತರ ನರಗನಹಳ್ಳಿ ಗ್ರಾಮಕ್ಕೆ ತೆರಳುವುದಾಗಿ ಹೇಳಿದ್ದರು. ನಂತರ ಬೈಕ್ ನಲ್ಲಿ ಹೋಗುವಾಗ ಚನ್ನಗಿರಿ ಬಳಿಯ ನುಗ್ಗಿಹಳ್ಳಿ ಕ್ರಾಸ್ ಬಳಿ ಅಪಘಾತವಾಗಿ ಮಗಳು ಮೃತಪಟ್ಟಿದ್ದಾಳೆ.
ಚನ್ನಗಿರಿ ಆಸ್ಪತ್ರೆ ಶವಗಾರದಲ್ಲಿ ಮೃತ ದೇಹ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದಾಗ ನಾನು ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಶವ ನೋಡಿ, ಇದು ಅಪಘಾತವಲ್ಲ ಕೊಲೆಯಾಗಿರಬಹುದು ಎಂದು ಶಂಕಿಸಿ ದೂರು ನೀಡಿದ್ದರು.



