ದಾವಣಗೆರೆ: ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಸಹ ಆಕಾಂಕ್ಷಿಯಾಗಿದ್ದು, ವರಿಷ್ಠರು ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಜಿಲ್ಲಾಧ್ಯಕ್ಷ ಸ್ಥಾನ ಬೇಡ ಎಂದಿಲ್ಲ. ಯಾರು ಅರ್ಜಿ ಸಲ್ಲಿಸಿದ್ದಾರೆಂದು ಗೊತ್ತಿಲ್ಲ. ನಾನು ಸಹ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿದ್ದು, ಅರ್ಜಿ ಸಲ್ಲಿದ್ದೇನೆ. ಸ್ಥಾನ ನೀಡಿದರೆ ನಿಭಾಯಿಸಲು ಸಿದ್ಧ ಎಂದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯ ರೈತರ ಹಿತ ಕಾಪಾಡಬೇಕು. ಭದ್ರಾ ಡ್ಯಾಂನಿಂದ ತರೀಕೆರೆ, ಕಡೂರು ಭಾಗದಲ್ಲಿ ನೀರು ಹರಿಸಲಾಗುತಿತ್ತು. ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಈ ನಿರ್ಧಾರ ತೆಗೆದುಕೊಂಡಿದ್ದು ತಪ್ಪು. ಭದ್ರಾವತಿ ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ಸದ್ಯಕ್ಕೆ ನೀರು ನಿಲುಗಡೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದರು.
ಮುಂಗಾರು ಬೆಳೆ ನೀರು ಬಿಡಲು ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ನಾವು ಭೇಟಿ ಮಾಡಿದ್ದೆವು. ಆದರೆ, ಇದುವರೆಗೆ ಯಾವುದೇ ಭರವಸೆ ಈಡೇರಲೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರ ಜೊತೆ ಮಾತನಾಡಿ ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಬೇಸಿಗೆ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಾಸಕರು, ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಸರ್ಕಾರಕ್ಕೆ ಅನುದಾನ ಕೇಳಿದರೆ ಗ್ಯಾರಂಟಿ ಯೋಜನೆಗಳಿಗೆ ಸಾಕಾಗುತ್ತಿಲ್ಲ ಎನ್ನುತ್ತಿದೆ ಎಂದರು.