ದಾವಣಗೆರೆ: ರಾಜ್ಯದಲ್ಲಿ ತೀವ್ರ ಬರಗಾಲ ಬಿದ್ದಿದ್ದು, ಮಳೆ ಕೊರತೆಯಿಂದ ಫಸಲು ಒಣಗಿ ಹೋಗಿವೆ. ಇದರಿಂದ ರೈತರು ಕಂಗಾಲಾಗಿದ್ದು, ಎಲ್ಲದಕ್ಕೂ ಕೇಂದ್ರದ ಕಡೆ ನೋಡದೇ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಜಮ್ಮಾಪುರದ ಸಿದ್ದಮ್ಮ, ಮರುಳಪ್ಪ ಎಂಬುವರ ಜಮೀನುಗಳಿಗೆ ಭೇಟಿ ನೀಡಿದ ಹಾಳಾಗಿದ್ದ ಮೆಕ್ಕೆಜೋಳ ವೀಕ್ಷಿಸಿಸಿದರು. ಈ ವೇಳೆ ಹಾಳಾದ ಬೆಳೆ ಬಗ್ಗೆ ಅಳಲು ತೋಡಿಕೊಂಡರು. ರೈತ ದಂಪತಿ ಕಣ್ಣೀರು ಹಾಕಿದ ಘಟನೆ ನಡೆಯಿತು. ಕೇಂದ್ರದ ಕಿಸಾನ್ ಸಮ್ಮಾನ್ ಸೇರಿ ಯಾವುದೇ ಪರಿಹಾರ ಬಂದಿಲ್ಲ ಎಂದು ದಂಪತಿ ಹೇಳಿದರು ಕೂಡಲೇ ಕೇಂದ್ರ ಸರ್ಕಾರದ ಪರಿಹಾರ ಕೊಡಿಸುವಂತೆ ಸಂಸದ ಸಿದ್ದೇಶ್ವರ ಅವರಿಗೆ ಸೂಚನೆ ನೀಡಿದರು.
ಕಣ್ಣೀರು ಹಾಕಿದ ರೈತ ದಂಪತಿಗೆ ಹಸಿರು ಶಾಲು ಹಾಕಿ ಹಣ್ಣು ನೀಡಿ ಸಾಂತ್ವನ ಹೇಳಿದರು. ನಂತರ ಆನಗೋಡಿನಲ್ಲಿ ತೀವ್ರ ಬರದಿಂದ ಸಂಪೂರ್ಣ ಬೆಳೆ ಹಾನಿಗೊಳಗಾಗಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದರು.



