ದಾವಣಗೆರೆ: ಗೃಹಬಳಕೆ ಗ್ಯಾಸ್ ಸಿಲಿಂಡರ್ ಗಳಿಗೆ ಆಧಾರ್ ಕೆವೈಸಿ ಮಾಡಿಸಿಕೊಳ್ಳಲು ಯಾವುದೇ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿಲ್ಲ. ಇಂತಹ ತಪ್ಪು ಮಾಹಿತಿ ಅಥವಾ ಸುಳ್ಳು ಸಂದೇಶಗಳನ್ನು ಗ್ರಾಹಕರು ನಂಬಬಾರದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ದಿನಾಂಕ 31-12-2023ರ ಒಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ. ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ಕಟ್ ಆಗಲಿದ್ದು, ಸಿಲಿಂಡರ್ ಸಂಪೂರ್ಣ ಹಣ ಪಾವತಿಸಬೇಕಾಗುತ್ತದೆ ಎಂಬ ಸುಳ್ಳು ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಡಿದ್ದು, ಗೊಂದಲ ಸೃಷ್ಟಿದೆ. ಇದರಿಂದ ಏಜೆನ್ಸಿ ಮುಂದೆ ಜನರಿ ಮುಗಿಬಿದ್ದು ಕೆವೈಸಿ ಮಾಡಿಸುತ್ತಿದ್ದಾರೆ.
ಕೆಲವು ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸುಳ್ಳು ಸಂದೇಶದಿಂದ ಗ್ರಾಹಕರು ಜಿಲ್ಲೆಯಾದ್ಯಂತ ಗ್ಯಾಸ್ ಏಜೆನ್ಸಿಗಳ ಮುಂದೆ ಕೆವೈಸಿ ಮಾಡಿಸಲು ಸಾಲುಗಟ್ಟಿ ನಿಲುತ್ತಿದ್ದಾರೆ. ಈ ಕುರಿತು ವಸಾರ್ವಜನಿಕರಲ್ಲಿ ಪ್ರಕಟಣೆ ಹೊರಡಿಸಿದ್ದು, ಮೇಲ್ಕಂಡ ವಿಷಯವು ಕೇವಲ ವದಂತಿಯಾಗಿದೆ. ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದು ಸಹ ಉಚಿತವಾಗಿ ನೀಡಬಹುದು. ಆದರೆ ಕೇಂದ್ರ ಸರ್ಕಾರವು ಯಾವುದೇ ಕೊನೆಯ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ.
ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿಗೆ ಮೊದಲು ಆದ್ಯತೆಯಾಗಿ ನೀಡಬೇಕಾಗಿದೆ. ಉಳಿದಂತೆ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ನೀಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸಾರ್ವಜನಿಕರು ಯಾವುದೇ ರೀತಿಯ ವಾಟ್ಸಪ್ ಮೆಸೇಜ್ ಹಾಗೂ ವದಂತಿಗಳನ್ನು ನಂಬಬಾರದು. ಅನಗತ್ಯವಾಗಿ ಗೊಂದಲಗಳಿಗೆ ಒಳಗಾಗಬಾರದು. ಗ್ರಾಹಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಬಹುದಾಗಿದೆ. ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವುದು ಬೇಡವೆಂದುತಿಳಿಸಲಾಗಿದೆ.



