Connect with us

Dvgsuddi Kannada | online news portal | Kannada news online

ದಾವಣಗೆರೆ: ವಾಸ್ತವಾಂಶ ಆಧಾರದಲ್ಲಿ ಮರು ಜಾತಿಗಣತಿ ಮಾಡಿ; ಸರ್ಕಾರಕ್ಕೆ ವೀರಶೈವ ಮಹಾಸಭಾದಿಂದ ಒಕ್ಕೊರಲ ಆಗ್ರಹ

ಪ್ರಮುಖ ಸುದ್ದಿ

ದಾವಣಗೆರೆ: ವಾಸ್ತವಾಂಶ ಆಧಾರದಲ್ಲಿ ಮರು ಜಾತಿಗಣತಿ ಮಾಡಿ; ಸರ್ಕಾರಕ್ಕೆ ವೀರಶೈವ ಮಹಾಸಭಾದಿಂದ ಒಕ್ಕೊರಲ ಆಗ್ರಹ

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ನಗರದ ಶ್ರೀ ರೇಣುಕಾಮಂದಿರದಲ್ಲಿ ಚಾಲನೆ ನೀಡಲಾಯಿತು. ರೇಣುಕಾಮಂದಿರದಿಂದ ಪ್ರಮುಖ ಬೀದಿಗಳಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಮತ್ತು ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಮೆರೆವಣಿಗೆ ಎಂಬಿಎ ಕಾಲೇಜ್ ಮೈದಾನದ ವರೆಗೆ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಅಧಿವೇಶನಕ್ಕೆ ಆಗಮಿಸಿದ್ದರು. ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

ಮುಖ್ಯ ವೇದಿಕೆ ಕಾರ್ಯಕ್ರನದಲ್ಲಿ ಕಾಂತರಾಜ್‌ ಆಯೋಗದ ಜಾತಿ ಗಣತಿ ವರದಿ ಪ್ರಸ್ತಾಪವಾಗಿದ್ದು, ವೀರಶೈವ ಲಿಂಗಾಯತ ಸಮಾಜದ ಸಚಿವರು, ಶಾಸಕರು, ಸ್ವಾಮೀಜಿಗಳು ಹಾಗೂ ಮುಖಂಡರು ಜಾತಿ ಗಣತಿಯ ವೈಜ್ಞಾನಿಕತೆ ಬಗ್ಗೆ ಧ್ವನಿ ಎತ್ತಿದರು.ನಾವ್ಯಾರೂ ಜಾತಿ ಗಣತಿಯ ವಿರೋಧಿಗಳಲ್ಲ. ವಾಸ್ತವಾಂಶದ ಆಧಾರದಲ್ಲಿ ಜಾತಿಯ ಗಣತಿ ಆಗಬೇಕು. ಈ ನಿಟ್ಟಿನಲ್ಲಿ ಮರು ಜಾತಿ ಗಣತಿಯನ್ನು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆಂತರಿಕ ಕಲಹ, ಒಳಬೇಗುದಿ ಬಿಟ್ಟು ಬದುಕಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯಿತು. ಸಮಾಜದ ಸಮಸ್ತರಿಗೂ, ಎಲ್ಲ ಭಾಗಗಳಲ್ಲಿ ಅವಕಾಶ ಇರಬೇಕು. ಕರ್ನಾಟಕದಲ್ಲಿ ಸಮಾಜ ಬೃಹತ್ ಆಗಿ ಬೆಳೆದಿದೆ.

ಈ ಹಿಂದೆ ಮುಂಬೈನಲ್ಲಿ ಅಧಿವೇಶನ ನಡೆದಿತ್ತು. ಆ ಸಂದರ್ಭದಲ್ಲಿ ಸರ್ಕಾರ ಜಾತಿ, ಜನಗಣತಿ ಮಾಡಲ್ಲ ಎಂದು ಹೇಳಿತ್ತು. ಆದರೆ, ಜಾತಿಗಣತಿ ಮೂಲಕ ಯಾವ ಸಮುದಾಯದವರು ಎಷ್ಟಿದ್ದಾರೆ ಎಂದು ತಿಳಿಯಬೇಕು ಎಂದು ಅಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದರು. ಅಂದರೆ ಜಾತಿಗಣತಿ ಮಾಡಬೇಕು ಎಂದು ಮೊದಲು ಹೇಳಿದ್ದು ಸಿದ್ದಗಂಗಾ ಶ್ರೀಗಳು. ಇವತ್ತು ವೈಜ್ಞಾನಿಕ ತಳಹದಿಯ ಮೇಲೆ ಪರಿಶೀಲನೆ ಮಾಡಬೇಕು ಎಂದು ಪ್ರಸ್ತಾಪ ಮಾಡುತ್ತಿದ್ದೇವೆ. ನಾವು ಜಾತಿಗಣತಿಗೆ ವಿರೋಧ ಮಾಡುತ್ತಿಲ್ಲ. ಆದರೆ, ಸರಿಯಾದ ಅಂಕಿ ಅಂಶಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹರಿಹರದಲ್ಲಿ 1918ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನ ನಡೆದಿತ್ತು. ಆದ್ರೆ, ಇದು ಇತಿಹಾಸ ಪುಟದಲ್ಲಿ ದಾಖಲಾಗಿಲ್ಲ, ಯಾಕೆ ತಪ್ಪಿ ಹೋಯಿತು ಎಂಬುದು ಗೊತ್ತಾಗ್ತಿಲ್ಲ. ಮಹಾಧಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇವೆ. ಇದನ್ನೂ ಇತಿಹಾಸ ಪುಟಗಳಲ್ಲಿ ದಾಖಲಾಗುವಂತೆ ಮಾಡಿ

1917ರಲ್ಲಿ ಪುಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಿತು. ನಂತರ 1918ರಲ್ಲಿ ಹರಿಹರದಲ್ಲಿ ವೀರಶೈವ ಮಹಾಸಭಾ ಅಧಿವೇಶನ ನಡೆಯಿತು. ಇದನ್ನು ಸಂಘಟಕರು ಗಮನಿಸಬೇಕು. ಅಂದಿನ ವೃತ್ತ ಪತ್ರಿಕೆಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು. ಇದನ್ನು ಯಾಕೆ ಗಮನಿಸಿಲ್ಲ ಎಂಬುದು ಗೊತ್ತಾಗುತ್ತಿಲ್ಲ.1918ರ ಏಪ್ರಿಲ್ 5ರಂದು ಮಹಾಧಿವೇಶನ ನಡೆದಿತ್ತು. ಅಧ್ಯಕ್ಷತೆ ವಹಿಸಿಕೊಂಡವರು ಮೈಸೂರು ಬಸಯ್ಯನವರು. ಗುರುಪಿತ ರಂಭಾಪುರಿ ಶ್ರೀಗಳು ಹಾಗೂ ಸಿರಿಗೆರೆಯ ಶ್ರೀಗಳು ಈ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಇದು ವೃತ್ತ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ನನ್ನ ಬಳಿ ಇದೆ. ಇತಿಹಾಸ ಪುಟದಲ್ಲಿ ದಾಖಲು ಮಾಡಬೇಕು ಎಂಬ ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.

ನಮ್ಮ ಸಮಾಜದಲ್ಲಿ ಈಗ ಬುದ್ಧಿವಂತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಕ್ಕಿಂತ ಮುನ್ನವೇ ಮಹಾ ಸಭಾದ ವೇದಿಕೆ ಮೂಲಕ ಈಗಿನ ತಂತ್ರಜ್ಞಾನ ಬಳಸಿಕೊಂಡು ನಮ್ಮ ಸಮಾದ ಜನಸಂಖ್ಯೆ ವರದಿ ತಯಾರಿಸಬೇಕು. ಅದನ್ನು ಆಧಾರವಾಗಿ ಇಟ್ಟುಕೊಂಡು ಸರ್ಕಾರಕ್ಕೆ ನಾವು ಇಷ್ಟು ಸಂಖ್ಯೆಯಲ್ಲಿದ್ದೇವೆ ಎಂದು ಹೇಳಲು ಅನುಕೂಲವಾಗುತ್ತಿದೆ. ಈ ಕಾರ್ಯ ಬಗ್ಗೆ ವೀರಶೈವ ಮಹಾ ಸಭಾ ಗಮನಹರಿಸಬೇಕು ಎಂದರು.

ಆನ್ ಲೈನ್ ಮೂಲಕ ಜಾತಿಗಣತಿ ನಡೆಯಲಿ. ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ಇದು ಕಷ್ಟವಾಗದು ಎಂಬುದು ತಮ್ಮ ಭಾವನೆ. ಆನ್ ಲೈನ್ ಗಣತಿ ಮಾಡಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಿ. ಆ ಬಳಿಕ ಸರ್ಕಾರ ಸರಿಯಾಗಿದ್ದರೆ ವರದಿ ಸ್ವೀಕಾರ ಮಾಡಲಿ ಎಂದು ಶ್ರೀಗಳು ಸಲಹೆ ನೀಡಿದರು.

ಸಮಾಜ ಸಂಘಟನೆ ಬಯಸುತ್ತಿದೆ. ಸಂಘಟನೆ ಒಡೆದವರು ಯಾರು? 1914-15ನೇ ಸಾಲಿನಲ್ಲಿ ಅಕ್ಷರಸ್ಥರ ಸಂಖ್ಯೆ ಅಧ್ಯಯನ ಮಾಡಲಾಗಿದೆ. ನೂರು ಜನಕ್ಕೆ 9 ಮಂದಿ ಕನ್ನಡ ಅಕ್ಷರಸ್ಥರು, ಹತ್ತು ಸಾವಿರಕ್ಕೆ ಇಂಗ್ಲೀಷ್ ಬಲ್ಲವರು ಹತ್ತು ಮಂದಿ ವೀರಶೈವ ಲಿಂಗಾಯತ ಸಮುದಾಯದವರಿದ್ದರು. ಒಕ್ಕಲಿಗರಲ್ಲಿ ಕನ್ನಡ ಬಲ್ಲವರು ನೂರಕ್ಕೆ ಮೂವರು, ಹತ್ತು ಸಾವಿರಕ್ಕೆ ಇಂಗ್ಲೀಷ್ ಬಲ್ಲವರು ಆರು ಮಂದಿ ಇದ್ದರು. ಕ್ರೈಸ್ತರಲ್ಲಿ ನೂರಕ್ಕೆ 25 ಮಂದಿಗೆ ಕನ್ನಡ, ಹತ್ತು ಸಾವಿರಕ್ಕೆ 900 ಕ್ರೈಸ್ತರಿಗೆ ಇಂಗ್ಲೀಷ್ ಬರುತ್ತಿತ್ತು. ಆದ್ರೆ, ಈಗ ಇದೇ ಗಣತಿ ಮಾಡಿದರೆ ವೀರಶೈವ ಲಿಂಗಾಯತ ಸಮುದಾಯ ಎಷ್ಟು ಸಾಧಿಸಿದೆ ಎಂಬುದು ಗೊತ್ತಾಗುತ್ತದೆ ಎಂದು ಉದಾಹರಣೆ ಸಮೇತ ಸಿರಿಗೆರೆ ಶ್ರೀಗಳು ವಿವರಿಸಿದರು.

ವೀರಶೈವ ಲಿಂಗಾಯತರಿಗೆ ಶತ್ರುಗಳು ಯಾರು ಎಂದರೆ ವೀರಶೈವ ಲಿಂಗಾಯತರೇ ವೀರಶೈವ ಸಮಾಜಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು. ವೀರಶೈವ ಸಮಾಜವು ಇಂದು ಅಧಃಪತನದತ್ತ ಸಾಗಲು ವೀರಶೈವರೇ ಕಾರಣ ಎಂದು ನೋವಿನ ಮಾತು ಆಡಿದರು.

ಸಮಾಜವದರು ಸ್ವಾರ್ಥ ಬದಿಗೆ ಸರಿಸಬೇಕು. ಎಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಂಘಟನೆ ಮಾಡಬೇಕು. ನಮ್ಮವರೇ ಶತ್ರುಗಳಂತಾದರೆ, ಯಾವುದೇ ರೀತಿಯ ಸಹಾಯ ಮಾಡದಿದ್ದರೆ ಸಮಾಜ ಒಗ್ಗಟ್ಟಾಗುವುದಾದರೂ ಹೇಗೆ? ಅಭಿವೃದ್ಧಿ ಹೊಂದುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡಗಳಾಗಿ ಹೋದರೆ ಯಾವ ಸೌಲಭ್ಯವೂ ಸಿಗುವುದಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಗದು. ವೀರಶೈವ ಲಿಂಗಾಯತ ಸಮುದಾಯದವರಲ್ಲಿ ಸ್ವಾರ್ಥ ಕಡಿಮೆಯಾಗಬೇಕು. ಸಮಾಜದ ಸಂಘಟನೆಗಾಗಿ ಒಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಾತನಾಡಿದ ಸಚಿವ ಹಾಗೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ನಾವು ಜಾತಿಗಣತಿ ವಿರೋಧಿಗಳು ಅಲ್ಲ. ಸಮೀಕ್ಷೆ ವಾಸ್ತವಾಂಶದಿಂದ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸರ್ಕಾರ ಹೊಸ ಜಾತಿ ಜನಗಣತಿಯನ್ನು ಮಾಡಬೇಕು. ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಮನವಿ ಮಾಡಿದ್ದೇವೆ. ಪಕ್ಷಾತೀತವಾಗಿ ಈ ನಿರ್ಣಯ ಮಾಡಿದ್ದೇವೆ. ಸಂಘಟಿತವಾಗಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಎಲ್ಲ ಜಾತಿಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಮುದಾಯವೆಂದರೆ ಅದು ವೀರಶೈವ ಲಿಂಗಾಯತ ಸಮುದಾಯ ಎಂದು ಹೇಳಿದರು.

ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗ 1990ರಲ್ಲಿ ನೀಡಿದ್ದ ನೀಡಿದ್ದ ವರದಿಯಂತೆ
ರಾಜ್ಯದಲ್ಲಿ ಶೇ.17ರಷ್ಟು ವೀರಶೈವ ಲಿಂಗಾಯತರಿದ್ದಾರೆ. ಈಚಿನ ಜಾತಿ ಸಮೀಕ್ಷೆಯ ಮಾಹಿತಿ ಪ್ರಕಾರ ಕೇವಲ ಶೇ.10.68ರಷ್ಟು ಜನರನ್ನು ತೋರಿಸಿರುವುದನ್ನು ನೋಡಿದರೆ ಮೂರೂವರೆ
ದಶಕದಲ್ಲಿ ಸಮುದಾಯ ಹೇಗೆ ಕಡಿಮೆಯಾಗಲು
ಸಾಧ್ಯ ಕಳವಳವ್ಯಕ್ತಪಡಿಸಿದರು.

ಇಂತಹ ಅವೈಜ್ಞಾನಿಕ ಅಂಕಿ ಅಂಶದ ಸಮೀಕ್ಷೆಯನ್ನೇ ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ನಾವೆಲ್ಲರೂ ವಿರೋಧಿಸುತ್ತಿರುವುದು.ವೀರಶೈವಲಿಂಗಾಯತಸಮುದಾಯವನ್ನು
ಯಾವುದೇ ಸರ್ಕಾರಗಳೂ ಕಡೆಗಣಿಸಬಾರದು.ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ವೀರಶೈವಲಿಂಗಾಯತರ ವಿಚಾರದಲ್ಲಿ ಚೆಲ್ಲಾಟವಾಡಬಾರದು.ಹಿಂದೇ ಇದೇ ಸಮಾಜವನ್ನು ಒಡೆಯಲು
ಹೋದವರುಕೈಸುಟ್ಟುಕೊಂಡಿರುವನಿದರ್ಶನವಿವೆ. ಅಂತಹ ದುಸ್ಸಾಹಸವನ್ನು ಯಾವುದೇ ಸರ್ಕಾರವೂಮಾಡಬಾರದು.

ವೃತ್ತಿ ಆಧಾರತ ಉಪ ಪಂಗಡಗಳಿವೆ. ಅವುಗಳನ್ನು ಒಗ್ಗೂಡಿಸಿ, ಸಮುದಾಯ ಆಧಾರಿತ ಜಾತಿ ಗಣತಿ ಸಮೀಕ್ಷೆ ವರದಿ ನೀಡಬೇಕು. ಆಗ ಇದ್ದ ಸಂಖ್ಯೆಗೆ ಹೋಲಿಸಿದರೆ ಈಗ ವೀರಶೈವ ಲಿಂಗಾಯತರ ಸಂಖ್ಯೆ 2 ಕೋಟಿ ಗಿಂತಲೂ ಹೆಚ್ಚಾಗಲಿದೆ. ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು. ರಾಜ್ಯದಲ್ಲೂ ಹೊಸದಾಗಿ ಜಾತಿಗಳ ಆರ್ಥಿಕ,ಸಾಮಾಜಿಕ ಸಮೀಕ್ಷೆ ಮಾಡಬೇಕು ಎಂದರು.

ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ. ಲಿಂಗಾಯತರು ಹಾಳಾದರೆ ರಾಜ್ಯ ಹಾಳಾಗುತ್ತದೆ. ನಮ್ಮದು ಹೇಡಿ ಸಮುದಾಯವಲ್ಲ. ಆರ್ಥಿಕವಾಗಿ ನಮ್ಮ ಸಮುದಾಯ ಸದೃಢರಾಗಬೇಕು. ನಾವು ಸದೃಢರಾದರೆ ಇತರ ಸಮುದಾಯವನ್ನು ಜತೆಗೆ ಕರೆದುಕೊಂಡು ಹೋಗಬೇಕು. ಇಂದು ನಮ್ಮ ಸಮಾಜದಲ್ಲಿ ಹಲವು ಕವಲು ದಾರಿಗಳಾಗಿವೆ. ನಾವೆಲ್ಲರೂ ಶ್ರೀಮಂತರಿದ್ದೇವೆ. ಆದರೆ, ಒಗ್ಗಟ್ಟಿನ ಕೊರತೆ ಹೆಚ್ಚಾಗಿದೆ. ವೀರಶೈವ ಲಿಂಗಾಯತ ಒಂದೇ ಎಂಬ ಭಾವನೆ ಮೂಡಬೇಕು. ಅದು ಈಗ ಮೂಡುತ್ತಿದೆ. ಎಲ್ಲ ಜಾತಿ, ಮತ, ಪಂಥಗಳ ಮೀರಿ ಅಪ್ಪಿಕೊಳ್ಳುವ ಸಮುದಾಯ ನಮ್ಮದು ಎಂದು ಈಶ್ವರ ಖಂಡ್ರೆ ಹೇಳಿದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ನಮ್ಮ ಸಮುದಾಯ 1993ರಲ್ಲಿ ಬಿಟ್ಟು ಹೋಗಿದೆ. ಅಭಿವೃದ್ಧಿ ಹೊಂದಿದ ಎಷ್ಟೋ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಇವೆ. ಆದರೆ, ನಮ್ಮ ಸಮುದಾಯ ಮಾತ್ರ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ. ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಕೂಡ ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕು. ಶೇಕಡಾ 27ರಷ್ಟು ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ವೀರಶೈವ ಒಳ ಪಂಗಡಗಳು ಒಂದಾಗಬೇಕು. ಒಂದಾದಾಗ ಮಾತ್ರ ಸರ್ಕಾರದಲ್ಲಿ ವೀರಶೈವ ಸಮುದಾಯ ಇರುತ್ತದೆ. ವೀರಶೈವ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಗೆ ಸೇರಬೇಕು ಎಂಬ ಒತ್ತಾಯವಿದೆ. ಜಾತಿಗಣತಿಯನ್ನು ನಾವು ಒಪ್ಪುವುದಿಲ್ಲ. ಕರ್ನಾಟಕದಲ್ಲಿ ಒಂದೂವರೆ ಕೋಟಿಗೂ ಅಧಿಕವಾಗಿ ಸಮುದಾಯದವರು ಇದ್ದಾರೆ. ವೀರಶೈವ ಸಮಾಜದ ಸಂಖ್ಯೆಯನ್ನು ಕಡಿಮೆ ತೋರಿಸಿ, ಯಾರಾದರೂ ಲಾಭ ‌ಮಾಡಿಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಅವರ ಹಗಲು ಕನಸು. ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ತೆಗೆದುಕೊಳ್ಳುವ ನಿರ್ಣಯಗಳಿಗೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 24ನೇ ಅಧಿವೇಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಹೆಸರಿನಲ್ಲಿ ನಿರ್ಮಾಣವಾದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.ಅಖಿಲ ವೀರಶೈವ ಲಿಂಗಾಯತ ‌ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದಾರೆ,ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಗದಗಿನ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯಜ್ಜನವರು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಮಹಾಸ್ವಾಮಿಗಳು, ಸಚಿವ ಎಸ್. ಎಸ್ ಮಲ್ಲಿಕಾರ್ಜುನ, ಶಾಸಕ ಬಿ.ಪಿ‌. ಹರೀಶ್, ಬಸವರಾಜು ಶಿವಗಂಗಾ, ಶಂಕರ್ ಬಿದರಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top