ದಾವಣಗೆರೆ: ಸಿರಿಧಾನ್ಯ ಬಳಸಿ ತಯಾರಿಸಿದ ವಿವಿಧ ಖಾದ್ಯ, ತಿನಿಸುಗಳು ನೋಡುಗರನ್ನು ಆಕರ್ಷಿಸುವಂತಿದ್ದವು. ಸಿರಿಧಾನ್ಯ ಬಳಸಿ ಇಷ್ಟೆಲ್ಲಾ ಖಾದ್ಯ ತಯಾರಿಸಬಹುದಾ..? ಹೌದು, ಈ ತಿನಿಸುಗಳ ಪ್ರದರ್ಶನ ಕಂಡು ಬಂದಿದ್ದು ಅಂತರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ….
ಸಿರಿಧಾನ್ಯ ಉಂಡೆ, ಗುಳ್ಳಡಿಕೆ ಉಂಡೆ, ಸಿರಿಧಾನ್ಯ ಲಡ್ಡು, ನವಣಕ್ಕಿ ಕಲ್ಲುಂಡೆ, ನವಣಕ್ಕಿ ಬೇಸನ್ ಉಂಡೆ, ರಾಗಿ ಸೂಪ್, ಸಿರಿಧಾನ್ಯ ಬಿಸ್ಕತ್ತು, ಸಿರಿಧಾನ್ಯ ಚುರುಮುರಿ, ಸಜ್ಜೆ ಕಡಬು, ನವಣೆ ಪೇಡಾ,ಸಾವೆ ಕಾರ್ನ್‌ಫ್ಲೇಕ್, ಸಾವೆ ಕಿಚಡಿ, ರಾಗಿ ಹಲ್ವ, ಬರಗು ಉಂಡೆ, ಊದಲು ಪಾಯಸ,ಸಜ್ಜೆ ಲಾಡು, ಸಾಮೆ ಬಿಸಿಬೆಳೆಬಾತ್, ಸಜ್ಜೆ ರೊಟ್ಟಿ, ನವಣಕ್ಕಿ ಬಿಸಿಬೇಳೆ ಬಾತ್, ನವಣಕ್ಕಿ ಚಿತ್ರಾನ್ನ, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್, ರಾಗಿ ಖೀಲ್ಸ, ಖರ್ಚಿಕಾಯಿ, ಲಡ್ಡು, ಬಿಸ್ಕೇಟ್, ಕೇಕ್, ಹೋಳಿಗೆ, ಚಕ್ಕುಲಿ, ಫುಲಾವ್, ಬಿಸಿ ಬೇಳೆಬಾತ್, ರಾಗಿ ಸೂಪ್, ಕೋಡುಬಳೆ, ನಿಪ್ಪಟ್ಟುಗಳು ಬಾಯಲ್ಲಿ ನೀರು ತರಿಸಿದವು…ಪ್ರತಿ ಸ್ಪರ್ಧಿಗೆ ಒಂದು ಸಿಹಿ ಹಾಗೂ ಒಂದು ಖಾರ ಸಸ್ಯಹಾರಿ ಖಾದ್ಯ ತಯಾರಿಸಲು ಅವಕಾಶ ನೀಡಲಾಗಿತ್ತು.
ಸಿಹಿ ತಿನಿಸು ವಿಭಾಗದ ಬಹುಮಾನ
- ದಾವಣಗೆರೆಯ ಸಿದ್ದೇಶ್ ತಯಾರಿಸಿದ ಹಾರಕದ ಗುಳ್ಳಡಿಕೆ ಉಂಡೆ , ಪ್ರಥಮ
- ದಾವಣಗೆರೆಯ ಎ.ಎಂ. ರಾಕೇಶ್ ತಯಾರಿಸಿದ ಸಿರಿಧಾನ್ಯ ಲಡ್ಡು, ದ್ವಿತೀಯ
- ರಾಗಿ ಖೀಲ್ಸ ತಯಾರಿಸಿದ ಶಿಲ್ಪ ದರ್ಶನ, ತೃತೀಯ
ಖಾರದ ಖಾದ್ಯ ವಿಭಾಗದ ಬಹುಮಾನ
- ದಾವಣಗೆರೆ ಜಿ.ಎಂ.ಎಸ್. ರಾಜೇಶ್ ಸಾಮೆ ಅವಲಕ್ಕಿ ಚೂಡಕ್ಕೆ ಪ್ರಥಮ
- ನವಣಕ್ಕಿ ಬುತ್ತಿ ತಯಾರಿಸಿದ ಹೊನ್ನಾಳಿ ತಾಲ್ಲೂಕಿನ ಕೋಟಿ ಮಲ್ಲೂರಿನ ಪಿ.ಜಿ.ಶಶಿಕಲಾ, ದ್ವಿತೀಯ
- ನವಣಕ್ಕಿ ಚಕ್ಕುಲಿ ತಯಾರಿಸಿದ ದಾವಣಗೆರೆಯ ದೀಕ್ಷಾ ಹಾಗೂ ಕೊರಲೆ ಕಟ್ಟು ಕಡುಬು ಮಾಡಿದ ಹರಿಹರದ ಸರೋಜಾ ಪಾಟೀಲ್, ತೃತೀಯ
ಜಿಲ್ಲಾ ಮಟ್ಟಕ್ಕೆ ಪ್ರಥಮ ಬಹುಮಾನವಾಗಿ ಖಾರ ತಿನಿಸು ಅಥವಾ ಸಿಹಿ ತಿನಿಸಿಗೆ ಐದು ಸಾವಿರ ರೂ.ಬಹುಮಾನ ನೀಡಲಾಯಿತು. ಈ ಸ್ಪರ್ಧೆಯಲ್ಲಿ 63 ತಯಾರಿಕರು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸುಪ್ರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಇಲಾಖೆಯ ಅಧಿಕಾರಿಗಳಾದ ಅಶೋಕ್, ಶ್ರೀಧರಮೂರ್ತಿ ಮತ್ತಿತರರು ಇದ್ದರು.



