ದಾವಣಗೆರೆ: ವಾಣಿಜ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಇಂದು ತೆಂಗು ಬೆಳೆಯ ವಿನಾಶದ ಅಂಚಿನಲ್ಲಿದೆ. ತೆಂಗು ಬೆಳೆ ಬೆಳಸಿ, ಉಳಿಸುವುದು ಪ್ರತಿಯೊಬ್ಬ ರೈತರ ಕರ್ತವ್ಯವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ, ತೆಂಗು ಅಭಿವೃದ್ಧಿ ಮಂಡಳಿ, ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ತೆಂಗು ಬೆಳೆಯ ವೈಜ್ಞಾನಿಕ ತಾಂತ್ರಿಕತೆಗಳು’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಸ್ಯ ಸಂಕುಲದಲ್ಲಿ ತೆಂಗು ಕಲ್ಪವೃಕ್ಷವೆಂದು ಗುರುತಿಸಲ್ಪಟ್ಟಿದೆ. ಇದನ್ನು ಬೆಳಸಿ, ಬಳಸಿ, ಉಳಿಸುವ ಕರ್ತವ್ಯ ಪ್ರತಿಯೊಬ್ಬ ರೈತರದಾಗಿದೆ. ಪೌಷ್ಠಿಕಾಂಶದಲ್ಲಿ ಅತೀ ಹೆಚ್ಚು ಲಾರಿಕ್ ಆಮ್ಲವುಳ್ಳ ತೆಂಗು ನಮೆಗೆಲ್ಲ ಸಂಜೀವಿನಿಯ ಇನ್ನೊಂದು ರೂಪ ಎಂದು ತಿಳಿಸಿದರು. ಅತೀ ಬರಗಾಲವನ್ನು ತಡೆದುಕೊಳ್ಳುವ ಸಾಮರ್ಥ್ಯ ತೆಂಗಿನ ಬೆಳೆದಿರುವುದರಿಂದ ಹವಾಮಾನ ವೈಪರೀತ್ಯದಲ್ಲಿ ಉತ್ತಮ ಆದಾಯ ಕೊಡುವ ತೋಟಗಾರಿಕೆ ಬೆಳೆ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಇಲಾಖೆಯ ವತಿಯಿಂದ ಬೆಳೆ ವಿಸ್ತರಣೆ, ತೆಂಗು ಪುನಶ್ಚೇತನ, ರೋಗ ಮತ್ತು ಕೀಟಗಳ ನಿರ್ವಹಣೆಗೆ ಅನುಧಾನ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು.
ತೆಂಗು ಅಭಿವೃದ್ಧಿ ಮಂಡಳಿಯ ಹಿರಿಯ ತಾಂತ್ರಿಕ ಅಧಿಕಾರಿ ಜಿ. ಧನಶೇಖರ್ ಮಾತನಾಡಿ, ತೆಂಗು ಅಭಿವೃದ್ಧಿ ಮಂಡಳಿಯ ಪ್ರಮುಖ ಯೋಜನೆಗಳಾದ ತೆಂಗಿನ ಮರ ಹತ್ತುವ ಕಾರ್ಯಕ್ರಮ, ಮೌಲ್ಯವರ್ಧನೆ ಮತ್ತು ಸಂಸ್ಕರಣಾ ಕಾರ್ಯಕ್ರಮ, ಕೀರ ಸುರಕ್ಷಾ ವಿಮಾ ಯೋಜನೆ, ಗುಣ ಮಟ್ಟದ ಸಸಿಗಳ ಉತ್ಪಾದನಾ ಉತ್ತೇಜನಾ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಮಾಹಿತಿ ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಕೇಂದ್ರದ ವತಿಯಿಂದ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮರ ಹತ್ತುವ ಸ್ನೇಹಿತರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿದ್ದು, ಪ್ರತೀ ವರ್ಷ 10 ಸಾವಿರಕ್ಕೂ ಹೆಚ್ಚು ಗುಣಮಟ್ಟದ ಅರಸೀಕೆರೆ ತಳಿಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ತೆಂಗಿನ ಬಿಳಿನೊಣ ನಿಯಂತ್ರಣಕ್ಕೆ ಐಸಿರಿಯಾ ಪರೋಪಜೀವಿಯನ್ನು ಉತ್ಪಾದಿಸಿ ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತೆಂಗಿನ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಮಣ್ಣು ವಿಜ್ಞಾನಿ ಸಣ್ಣಗೌಡ್ರ ಹೆಚ್. ಎಂ, ರೋಗ ಮತ್ತು ಕೀಟಗಳ ನಿರ್ವಹಣೆಯ ಬಗ್ಗೆ ಡಾ. ಅವಿನಾಶ್ ಟಿ.ಜಿ., ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಬಗ್ಗೆ ವೈಜಿಪಿ ರೈತ ಉತ್ಪಾದಕ ಕಂಪನಿಯ ಮುಖ್ಯಸ್ಥ ಪ್ರಶಾಂತ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರೇಷ್ಮಾ ಪರ್ವಿನ್, ವೀರಭದ್ರಸ್ವಾಮಿ, ಇಲಾಖಾ ಅಧಿಕಾರಿ ಶ್ರಿ ಲಕ್ಷ್ಮೀ, ನಿಟ್ಟೂರು ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ನಿಟ್ಟೂರು ಶಿವಣ್ಣ, ಪ್ರಕಾಶ್, ರಾಜೇಂದ್ರ, ವಿಜ್ಞಾನಿಗಳು ಹಾಗೂ 150ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.