ಬೆಂಗಳೂರು: ಅನಧಿಕೃತ ಆರೋಗ್ಯ ಸಂಸ್ಥೆ, ಆಸ್ಪತ್ರೆಗಳು, ಕ್ಲಿನಿಕ್ ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಬಗ್ಗೆ ಪರಿಶೀಲಿಸಿ ಸೀಲ್ ಮಾಡಿ ಕೆಪಿಎಂಇ (KPME) ಕಾಯ್ದೆಯಡಿ ಕ್ರಮವಹಿಸಲು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ನಕಲಿ ವೈದ್ಯರು ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯ ನಡೆಸುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಕೆಪಿಎಂಇ ಅಡಿಯಲ್ಲಿ ನೋಂದಾಯಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಡಾ.ರಂದೀಪ ತಿಳಿಸಿದ್ದಾರೆ.
ಕೆಪಿಎಂಇಯ ನೋಂದಣಿ ಮಾಡಿಕೊಳ್ಳದೆ ಖಾಸಗಿಯಾಗಿ ವೈದ್ಯಕೀಯ ಸಂಸ್ಥೆ ಸ್ಥಾಪಿಸಿ ಚಿಕಿತ್ಸೆ ನೀಡುವುದು ಅಪರಾಧ. ಇಂತಹ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ, ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1ಲಕ್ಷ ರೂ.ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ವೈದ್ಯಕೀಯ ಸಂಸ್ಥೆ, ಕ್ಲಿನಿಕ್, ಪ್ರಯೋಗಾಲಯಗಳು ಕಂಡು ಬಂದರೆ ತತ್‌ಕ್ಷಣವೇ ಬಂದ್ ಮಾಡಿಸಬೇಕು. ಜತೆಗೆ ಕೆಪಿಎಂಇಗೆ ನಕಲಿ ವೈದ್ಯರ ಬಗ್ಗೆ ಮಾಹಿತಿ ನೀಡಬೇಕು.
ಅನಧಿಕೃತ ವೈದ್ಯಕೀಯ ಸಂಸ್ಥೆ ಅಥವಾ ಕ್ಲಿನಿಕ್ ಅಥವಾ ಆಸ್ಪತ್ರೆಅಥವಾ ಚಿಕಿತ್ಸಾ ಪ್ರಯೋಗಾಲಯಗಳನ್ನು ಸೀಲ್ ಮಾಡಿರುವ ಬಗ್ಗೆ ಮತ್ತು ಅವುಗಳನ್ನುನಡೆಸುತ್ತಿರುವ ನಕಲಿ ವೈದ್ಯರುಗಳ ಬಗ್ಗೆ ಕಡ್ಡಾಯವಾಗಿ ಅಲ್ಲಿನ ಕೆ.ಪಿ.ಎಂ.ಇ ನೋಂದಣಿ ಮತ್ತು ಕುಂದು ಕೊರತೆ ನಿವಾರಣೆ ಪ್ರಾಧಿಕಾರದಲ್ಲಿ ನಿರ್ಧರಿಸಿ, ಮುಂದಿನ ಕ್ರಮಕ್ಕಾಗಿ ವೈಯಕ್ತಿಕ ಕ್ರಿಮಿನಲ್
ದೂರನ್ನು (PCR) ಮ್ಯಾಜಿಸ್ಟ್ರೇಟ್ ನ್ಯಾಯಲಯಕ್ಕೆ ಸಲ್ಲಿಸುವಂತೆ ಮತ್ತು Indian Penal Code (IPC) ಪ್ರಕಾರ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚಿಸುವಂತೆ ತಪಾಸಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರ ಸಂಪೂರ್ಣ ವಿವರವನ್ನು ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಆರೋಗ್ಯ ಇಲಾಖೆ ಡಿಎಚ್‌ಒಗಳು ಸಲ್ಲಿಕೆ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.



