ದಾವಣಗೆರೆ: ಮುಂಬರುವ ಲೋಕಸಭೆ ಚುನಾವಣೆ ದಾವಣಗೆರೆ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರು ಸರ್ವೇ ನಡೆಸಿ ಜನಾಭಿಪ್ರಾಯ ಪಡೆದು ಟಿಕೆಟ್ ನೀಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಸರ್ವೇ ನಡೆಸಿದರೆ ಯಾರಿಗೆ ಜನಪ್ರಿಯತೆ ಸಿಗುತ್ತೆ ಎಂಬುದು ಗೊತ್ತಾಗುತ್ತದೆ. ಪ್ರತಿ ಸಲ ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ರೆ ನನ್ನ ವರ್ಚಸ್ಸು ಕುಗ್ಗತ್ತದೆ. ಪಕ್ಷದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದ ಅವರು, ಜನಾಭಿಪ್ರಾಯದ ಮೇಲೆ ಟಿಕೆಟ್ ನೀಡಲಿ ಎನ್ನುವ ಮೂಲಕ ಪರೋಕ್ಷವಾಗಿ ಹಾಲಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರಗೆ ಟಾಂಗ್ ನೀಡಿದರು.
ಬಿಜೆಪಿ ಸರ್ಕಾರ ಕೊಟ್ಟ ಯೋಜನೆಗಳನ್ನು ಕಾಂಗ್ರೆಸ್ ನಿಂದ ಕೊಡಲು ಆಗುತ್ತಿಲ್ಲ. ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ ಸಮರ್ಪಕ ಅನುಷ್ಠಾನ ಆಗಿಲ್ಲ. ಯುವನಿಧಿ ಇನ್ನೂ ಜಾರಿಯಾಗಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಿಸುವ ಭರವಸೆ ಭರವಸೆಯಾಗಿಯೇ ಉಳಿದಿದೆ. ಎನ್ ಪಿಎಸ್ ಬಗ್ಗೆ ಚಕಾರ ಎತ್ತಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿಯನ್ನು ರೈತರಿಗೆ ನೀಡುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂಪಾಯಿ ನೀಡುತಿತ್ತು. ಆದ್ರೆ ಈಗ ನಾಲ್ಕು ಸಾವಿರ ರೂ. ನಿಲ್ಲಿಸಿದೆ. ಇದನ್ನು ಕೂಡಲೇ ಜಾರಿಗೊಳಿಸಬೇಕು. ಬಡವರು, ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಮದ್ಯ, ವಿದ್ಯುತ್ ಯುನಿಟ್ ದರ ಜಾಸ್ತಿ ಮಾಡಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಬರ ಪರಿಹಾರ ಕೇಂದ್ರ ಸರ್ಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಬೊಟ್ಟು ತೋರಿಸುತ್ತಿದ್ದಾರೆ. ಬೆಳೆ ನಷ್ಟಕ್ಕೆ ಪ್ರತಿ ರೈತರಿಗೆ 2 ಸಾವಿರ ರೂಪಾಯಿ ನೀಡುತ್ತಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸಲಿಲ್ಲ. ನಮ್ಮ ಅವಧಿಯಲ್ಲಿ 23 ಸಾವಿರ ರೂ. ಪರಿಹಾರ ಕೊಟ್ಟಿದ್ದೇವೆ. ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಸಂಕಷ್ಟದ ವೇಳೆಯಲ್ಲಿಯೂ ಜನರ ಹಿತ ಕಾಪಾಡುವ ಕೆಲಸ ಬಿಜೆಪಿ ಸರ್ಕಾರ ಮಾಡಿತ್ತು. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.



