ದಾವಣಗೆರೆ: ಜಾತಿ ಜನಗಣತಿ ವರದಿ ಬಿಡುಗಡೆಗೆ ನಿನ್ನೆ (ನ.09) ಬೆಂಗಳೂರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಇಂದು ಮತ್ತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬಳಿ ಹಳೇ ವರದಿ ಇದೆ, ಹೊಸದಾಗಿ ಜನಗಣತಿ ಆಗ್ರಹಿಸುತ್ತೇವೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಸಮುದಾಯದ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಮನೆಯಲ್ಲೇ ಕುಳಿತು ವರದಿ ಸಿದ್ಧಪಡಿಸಲಾಗಿದೆ. ಜನಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕು ಎಂದರು.
ಪಂಚಮಸಾಲಿ ಲಿಂಗಾಯತ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲಿದ್ದೇವೆ.ಡಿಸೆಂಬರ್ 23, 24 ರಂದು ದಾವಣಗೆರೆಯಲ್ಲಿ ಮಹಾ ಸಭಾದ ಅಧಿವೇಶನ ನಡೆಯಲಿದ್ದು, ಸಮಾವೇಶದಲಲ್ಲಿ ಎರಡು ಲಕ್ಷ ಜನರು ಸೇರಲಿದ್ದಾರೆ. ವೀರಶೈವ ಲಿಂಗಾಯತ ಸಮಾವೇಶದಲ್ಲಿ ಹೆಚ್ಚಿನ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.



