ದಾವಣಗೆರೆ: ರಾಜ್ಯದಲ್ಲಿ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿತ್ರದುರ್ಗ, ದಾವಣಗೆರೆಯಲ್ಲಿಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಎರಡು ದಿನ ಹಾಗೂ ಚಿಕ್ಕಮಗಳೂರು, ಕೊಡಗಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಹಾಗೂ ರಾಮನಗರದಲ್ಲಿ ನ.7ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 64.5ಮಿ.ಮೀ.ನಿಂದ 115.5 ಮಿ.ಮೀ. ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರಿನಲ್ಲಿ ನ.8ರಿಂದ ನ.10ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ. ಸೋಮವಾರ ದಾವಣಗೆರೆ ಜಿಲ್ಲೆಯ ಹರಿಹರ ಹಾಗೂ ಕಡರನಾಯ್ಕನಹಳ್ಳಿ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ, ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು, ತ್ಯಾವಣಿಗೆ ಹಾಗೂ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಭಾಗಗಳಲ್ಲಿ ಮಳೆಯಾಗಿದೆ. ಹರಿಹರದಲ್ಲಿ 22 ಮಿ.ಮೀ, ಕೊಂಡಜ್ಜಿಯಲ್ಲಿ 14.6ಮಿ.ಮೀ, ಹೊಳೆಸಿರಿಗೆರೆಯಲ್ಲಿ 10ಮಿ.ಮೀ, ಮಲೆಬೆನ್ನೂರಿನಲ್ಲಿ 36.8 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನಲ್ಲಿ 20.85 ಮಿ.ಮೀ. ಮಳೆ ದಾಖಲಾಗಿದೆ. ಹಿಂಗಾರು ಮಳೆಯಿಂದ ರೈತರಿಗೆ ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ.