ಅನ್ನದಾತ ರೈತನಿಗೆ ಸಂಭ್ರಮದ ದಿನ. ಅನ್ನದಾತರ ಜೀವನಾಡಿ ಭೂ ತಾಯಿಗೆ ವಿಶೇಷ ಸಿಂಗಾರಗೊಳಿಸಿ ಪೂಜೆ ಸಲ್ಲಿಸುವ ಭೂಮಿ ಹುಣ್ಣಿಮೆ ನೋಡದೇ ಒಂದು ಚಂದ. ಜಮೀನಿನಲ್ಲಿ ಮೈ ತುಂಬಿದ ಬೆಳೆದ ಬೆಳೆಗೆ ಹಾಗೂ ಭೂ ತಾಯಿಗೆ ಮನೆಯವರೆಲ್ಲ ಸೇರಿ ಪೂಜೆ ಸಲ್ಲಿಸುವುದೇ ಭೂಮಿ ಹುಣ್ಣಿಮೆ ವಿಶೇಷ. ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದರು.
ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ ಜೀವನಾಡಿಯಾಗಿದೆ. ಭೂಮಿ ಹುಣ್ಣಿಮೆ ದಿನ ಮೈ ತುಂಬಿ ಬೆಳೆದ ಭೂತಾಯಿಗೆ ಸೀಮಂತ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದ ಭತ್ತ, ಅಡಿಕೆ, ಅಡಿಕೆ, ತುಂಗು,ಬಾಳೆ ಹೀಗೆ ಯಾವ ಬೇಳೆ ಇರುತ್ತೋ ಆ ವೆಳೆಗೆ ಸೀರೆ ಉಡಿಸಿ ಉಡಿ ತುಂಬುವುದು ವಾಡಿಕೆಯಾಗಿದೆ. ಜೊತೆಗೆ ಭೂ ತಾಯಿಗೆ ವಿಶೇಷವಾಗಿ ತಯಾರಿಸಿದ ಸಹಿ ಅಡುಗೆ,ಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಎಡೆ ಮಾಡಿ ಅರ್ಪಿಸಿ ಸಂಭ್ರಮಿಸುತ್ತಾರೆ.
ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ರೈತರು ಭೂಮಿ ಹುಣ್ಣಿಮೆ ಆಚರಿಸುತ್ತಾರೆ. ಬುಟ್ಟಿ ತಯಾರಿಸಿ ಅದಕ್ಕೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿಕೊಂಡು ತಮ್ಮ ಹೊಲಗಳಿಗೆ ಹೋಗಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ನಂತರ ಚರಗವನ್ನು ತಮ್ಮ ಹೊಲದ ಸುತ್ತ ಬೀರುತ್ತಾರೆ.
ಮನೆಯವರೆಲ್ಲರೂ ಸಂತಸ ಸಂಭ್ರಮಗಳಿಂದ ಒಟ್ಟಾಗಿ ತೋಟದಲ್ಲೆ ಊಟ ಮಾಡುವ ದೃಶ್ಯ ಕೂಡ ಸುಂದರವಾಗಿರುತ್ತದೆ. ಒಟ್ಟಾರೆ ಭೂಮಿಯನ್ನೆ ನಂಬಿರುವ ನಮ್ಮ ರೈತರು ಇದನ್ನು ಆರಾಧನೆಯಂತೆ ಮಾಡುತ್ತಾರೆ. ನೀರಾವರಿ ಪ್ರದೇಶದಲ್ಲಿ ಈ ಸಂಭ್ರಮ ಜೋರು ಇರುತ್ತೆ. ಆದರೆ, ಬಯಲುಸೀಮೆಯಲ್ಲಿ ತಕ್ಕಮಟ್ಟಿಗೆ ಈ ಹಬ್ಬ ಆಚರಿಸುತ್ತಾರೆ.



