ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಕೆಲ ಜಿಲ್ಲೆಯಲ್ಲಿ ಇಂದಿನಿಂದ ಎರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಮಂಡ್ಯ, ಧಾರವಾಡ, ಬೆಳಗಾವಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಹೆಚ್ಚಿನ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಮಳೆ ದುರ್ಬಲವಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ.
ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ 9 ಸೆಂ.ಮೀ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ 8, ಕೊಡಗಿನ ವಿರಾಜಪೇಟೆಯಲ್ಲಿ 6, ಮಂಗಳೂರು ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 5, ಚಿಕ್ಕಮಗಳೂರಿನ ಜಯಪುರದಲ್ಲಿ 4, ಪಣಂಬೂರು, ಉಡುಪಿ, ಟಿ.ನರಸೀಪುರ, ಹುಣಸೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.



