ಮೈಸೂರು: ಲಿಂಗಾಯತ ಸಮುದಾಯದವರೇ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ವೋಟ್ ಹಾಕಿಲ್ಲ. ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ತಮ್ಮ ಬೀಗರನ್ನು ಗೆಲ್ಲಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಯಾಕೇ ಗೆಲ್ಲಿಸಿಕೊಳ್ಳುತ್ತಿಲ್ಲ ಎಂಬುದನ್ನು ಮೊದಲು ತಿಳಿಸಲಿ ಎಂದು ಎಂಎಲ್ ಸಿ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಾಮನೂರು ಅವರು 7 ಬಾರಿ ಗೆದ್ದಿರುವುದು ಸ್ವಂತ ವರ್ಚಸ್ಸಿನಿಂದ ಅಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿಂದ ಗೆದ್ದಿದ್ದಾರೆ. ಲಿಂಗಾಯತ ಸಮುದಾಯವೇ ಅವರಿಗೆ ವೋಟ್ ಹಾಕಿಲ್ಲ. ದಾವಣಗೆರೆಯನ್ನು ಅಪ್ಪ ಮಕ್ಕಳೇ ವಹಿಸಿಕೊಂಡಿದ್ದಾರೆ. ಹೀಗಾಗಿ ಅವರು ಯಾರಿಂದ ಗೆದ್ದಿದ್ದಾರೆ. ಯಾಕೇ ಎಂಪಿ ಚುನಾವಣೆ ಗೆಲ್ಲಲು ಆಗುತ್ತಿಲ್ಲ ಎಂದು ತಿಳಿಸಲಿ ಎಂದರು.
ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಗಳಿಗೆ ಅನ್ಯಾಯವಾಗಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕಪ್ಪ ಮಾತನಾಡಿದ್ದರು. ಇದಕ್ಕೆ ಶಿವಶಂಕರಪ್ಪ ವಿರುದ್ಧ ಎಂಎಲ್ ಸಿ ವಿಶ್ವನಾಥ್ ಕಿಡಿಕಾರಿದ್ದರು. ವಿಶ್ವನಾಥ ರೀತಿ ನಾನು ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್ಸಿ ಆಗಿಲ್ಲ. ನಾನು ಜನರಿಂದ 7 ಬಾರಿ ಆಯ್ಕೆಯಾಗಿದ್ದೇನೆ. ಹೆಚ್. ವಿಶ್ವನಾಥ್ಗೆ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದು ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದರು.



