ಬೆಂಗಳೂರು: ಆಹಾರ ಇಲಾಖೆಯು ಬಿಪಿಎಲ್, ಎಪಿಎಲ್ ಕಾರ್ಡ್ (APL,BPL Card) ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದೆ. ಹೆಸರು ಬದಲಾವಣೆ, ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ತೆಗೆಸುವುದು, ಸೇರಿಸುವುದು, ಕಾರ್ಡಿನ ಮುಖ್ಯಸ್ಥರ ಹೆಸರು ಬದಲಾವಣೆ ಸೇರಿದಂತೆ ಕೆಲವು ತಿದ್ದುಪಡಿಯನ್ನು ಮಾಡಿಕೊಳ್ಳಬಹುದು. ದಾವಣಗೆರೆಯಲ್ಲಿ ಇಂದಿನಿಂದ ಮೂರು ದಿನ ತಿದ್ದುಪಡಿಗೆ ಅವಕಾಶವಿದೆ.
ಸರ್ಕಾರದ ಕೆಲವು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿರುವ ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ದಾವಣಗೆರೆ ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಈ ತಿದ್ದುಪಡಿಯು ಜಿಲ್ಲಾವಾರು ದಿನಾಂಕ ನಿಗದಿಪಡಿಸಿದ್ದು, ಮೂರು ಹಂತಗಳಲ್ಲಿ ನಡೆಯಲಿದೆ.
ಈಗಾಗಲೇ ಎರಡು ಹಂತ ಮುಗಿದಿದ್ದು 3ನೇ ಹಂತ ಇಂದಿನಿಂದ (ಅ.11 ರಿಂದ ಅ.13ರ ವರೆಗೆ) ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು 14 ಜಿಲ್ಲೆಗಳಿಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.



