ಬೆಳಗಾವಿ; ಲಿಂಗಾಯತ ಸಮುದಾಯ ವಿರುದ್ಧ ನೇರ ವಾಗ್ದಾಳಿ ನಡೆಸಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ , ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿರೋದು. ಸರ್ಕಾರದಲ್ಲಿ ನಿಮಗೆ 7 ಮಂತ್ರಿ ಸ್ಥಾನ ಕೊಟ್ಟಿದೆ, ಇನ್ನೆಷ್ಟು ಕೊಡಬೇಕು. ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ಚುನಾವಣೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಸಿದ್ದು, ಜಾತ್ಯತೀತವಾದ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾದ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಟ್ಟಿದ್ದೇವೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು ಎಂದರು.
ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಸಮುದಾಯದವರಿಂದ ಹೆಚ್ಚಿನ ಮತ ಹಾಕಿಸಿ. ನಂತರ ಗೆದ್ದು ಬಂದು ಮುಖ್ಯಮಂತ್ರಿಯಾಗಿ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದಿಂದ ಎಷ್ಟು ಮತ ಹಾಕಿಸಿದ್ದೀರಿ..? ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿದ್ದೀರಿ ಅನಾವಶ್ಯಕವಾಗಿ ಮಾತನಾಡಬೇಡಿ ಎಂದು ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರವಿದ್ದವರು ನೀವು. ಈ ವಿಷಯವನ್ನೇಕೆ ಬೀದಿಗೆ ಬಂದು ದೊಡ್ಡ ರಂಪಾಟ ಮಾಡುತ್ತಿದ್ದೀರಾ? ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಕಿಡಿಕಾರಿದರು.ಈ ರೀತಿಯಾಗಿ ಜಾತಿಯ ವಿಷಯ ಮಾತನಾಡಿದರೆ ಆಡಳಿತ ಕುಸಿಯುತ್ತದೆ. ನಿಮಗೆ ಜವಾಬ್ದಾರಿ ಇಲ್ಲವೇ? ಜವಾಬ್ದಾರಿಯಿಂದ ಮಾತನಾಡಿ. ನೀವೇ ಹೀಗೆ ಮಾತನಾಡಿದರೆ, ಸಣ್ಣ-ಪುಟ್ಟ ಜಾತಿಗಳ ಭವಿಷ್ಯವೇನು? ಎಂದು ಕುಟುಕಿದರು.



