ಡಿವಿಜಿ ಸುದ್ದಿ, ದಾವಣಗೆರೆ: 25 ಸಾವಿರ ರೂಪಾಯಿ ಹಣಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣವನ್ನು ದಾವಣಗೆರೆ ಜಿಲ್ಲಾ ಪೊಲೀಸರು ಪತ್ತೆಹಚ್ಚಿ ಮಗುವನ್ನು ರಕ್ಷಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮಗುವನ್ನು ಪತ್ತೆ ಹಚ್ಚಿದ್ದಾರೆ.
ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳ ದೂರಿನ ಮೇರೆಗೆ ಮಗು ಮಾರಾಟ ಪ್ರಕರಣ ಪತ್ತೆ ಹಚ್ಚಿದ್ದು, ಮಧ್ಯವರ್ತಿಯಾಗಿ ಆಸ್ಪತ್ರೆಯೊಂದರ ಆಯಾ ಒಬ್ಬರು ಪಾಲ್ಗೊಂಡಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಪ್ರಕರಣದಲ್ಲಿ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಡಿಸೆಂಬರ್ 26 ರಂದು ಡಾನ್‍ಬಾಸ್ಕೋ ಬಾಲಕಾರ್ಮಿಕ ಮಿಷನ್ ಸಹಾಯವಾಣಿಗೆ ಕರೆ ಮಾಡಿ ದಾವಣಗೆರೆ ಅಂಬೇಡ್ಕರ್ ನಗರ ನಿವಾಸಿ ಕವಿತಾ, ಮಂಜುನಾಥ ದಂಪತಿಯ ಮಗು ಮಾರಾಟವಾಗಿದೆ ಎಂದು ಮಾಹಿತಿ ನೀಡಿದ್ದರು. ಈ ಸುಳಿವಿನ ಮೇಲೆ ಮಹಿಳಾ ರಕ್ಷಣಾ ಅಧಿಕಾರಿಗಳು ಪ್ರಕರಣ ಪತ್ತೆ ಹಚ್ಚಿದ್ದಾರೆ. ಮಂಜುನಾಥ್ ದಂಪತಿಗೆ ಈಗಾಗಲೇ ನಾಲ್ಕು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಹೆಣ್ಣು ಮಗು ಸಾನ್ವಿ( ಒಂದುವರೆ ವರ್ಷ) ಎನ್ನುವ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆ ಸಹಾಯದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಜ.9 ರಂದು ಮನೆಗೆ ಭೇಟಿ ನೀಡಿದಾಗ ಮಗುವಿನ ತಂದೆ ಮಂಜುನಾಥ್ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಈಗಾಗಲೇ ತಮಗೆ 3 ಹೆಣ್ಣು ಮಕ್ಕಳಿದ್ದು, 4ನೇ ಮಗವೂ ಹೆಣ್ಣು ಮಗುವಾಗಿರುವ ಕಾರಣ ಹಾಗೂ ಮನೆಯಲ್ಲಿ ಕಷ್ಟವಿದ್ದ ಕಾರಣ ತಮ್ಮ ಮಗುವನ್ನು ರಾಣೇಬೆನ್ನೂರಿನ ದ್ರಾಕ್ಷಾಯಿಣಿ, ಸಿದ್ದು ಸಂಪತಿಗೆ ರೂ.25 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮಗು ಪೋಷಕರಾದ ಮಂಜುನಾಥ, ಕವಿತಾ, ಖರೀದಿಸಿದ ದ್ರಾಕ್ಷಾಯಿಣಿ, ಸಿದ್ದು ಮಾರಾಟಕ್ಕೆ ಸಹಕಾರ ನೀಡಿದ ರವಿ, ಕರಿಬಸಪ್ಪ, ಚಿತ್ರಮ್ಮ ಮತ್ತು ಕಮಲಮ್ಮರವರ ಮೇಲೆ ದೂರು ದಾಖಲಿಸಿ ಬಂಧಿಸಲಾಗಿದೆ. ಮಗುವನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಕ್ಕಳ ಕಲ್ಯಾಣ ಸಮಿತಿ ಒಪ್ಪಿಸಲಾಗಿದೆ.
ಮಗು ಮಾರಾಟ ಪ್ರಕರಣ ಬೇಧಿಸುವಲ್ಲಿ ಸಹಕರಿಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.
ಸರಗಳ್ಳತನ ಜಾಲ ಪತ್ತೆಗೆ ಕ್ರಮ : ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಿದ್ದು ಇತ್ತೀಚೆಗೆ ನಡೆದ ಸರಣಿ ಸರಗಳ್ಳತನದಲ್ಲಿ ಪುಣೆಯ ಇರಾನಿ ತಂಡದ ಕೈವಾಡವಿದೆ ಎಂದು ತಿಳಿದುಬಂದಿದ್ದು ಈ ಕುರಿತು ಸಮಗ್ರ ತನಿಖೆ ಜೊತೆಗೆ ಸರಗಳ್ಳರನ್ನು ನಿಗ್ರಹಿಸಲು ಕ್ರಮ ವಹಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಎಸ್‍ಪಿ ರಾಜೀವ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕಿ ನಾಗಮ್ಮ ಇದ್ದರು.



