ದಾವಣಗೆರೆ: ಕಾವೇರಿ ನೀರಿಗಾಗಿ ಕೆರೆ ನೀಡಲಾಗಿದ್ದ ಕರ್ನಾಟಕ ಬಂದ್ ಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವಾರ ಸೋಮವಾರದಂದು ಭದ್ರಾ ನೀರಿಗಾಗಿ ದಾವಣಗೆರೆ ಬಂದ್ ಕರೆ ನೀಡಲಾಗಿತ್ತು. ಹೀಗಾಗಿ ಇಂದು ನಡೆದ ಬಂದ್, ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಕನ್ನಡಪರ ಸಂಘಟನೆಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕರವೇ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.ಎಂದಿನಂತೆ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರವಿತ್ತು. ದಾವಣಗೆರೆಯಿಂದ ಬೆಂಗಳೂರು, ಮಂಗಳೂರು, ಶಿವಮೊಗ್ಗ ಸೇರಿ ಬೇರೆ ಬೇರೆ ಕಡೆ ಬಸ್ ಸಂಚಾರ ಇತ್ತು. ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು.ನಗರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಗಳ ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದ ಕನ್ನಡಪರ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಶಾಲಾ ಕಾಲೇಜುಗಳಿಗೆ ಯಾವುದೇ ಅಡಚಣೆ ಇರಲಿಲ್ಲ. ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿದ್ದವು. ಆಟೋ, ಗೂಡ್ಸ್ ವಾಹನಗಳ ಓಡಾಟ ಎಂದಿನಂತೆ ಇತ್ತು. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರ ಸಮಿತಿಗೆ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುವಂಥ ಹೊಸ ತಜ್ಞರ ನೇಮಕ ಮಾಡಬೇಕು. ತಮಿಳುನಾಡು ಕೇಳಿದಂತೆ ನೀರು ಹರಿಸುವುದನ್ನು ಬಿಡಬೇಕು. ಮೊದಲು ರಾಜ್ಯಕ್ಕೆ ಆದ್ಯತೆ ನೀಡಿ. ಆಮೇಲೆ ತಮಿಳುನಾಡಿಗೆ ನೀರು ಹರಿಸಲಿ. ಡ್ಯಾಂನಲ್ಲಿಯೇ ಹೆಚ್ಚು ನೀರಿಲ್ಲ. ಬೇರೆ ರಾಜ್ಯಕ್ಕೆ ನೀರು ಹರಿಸಿದರೆ ಇಲ್ಲಿನ ರೈತರ ಸ್ಥಿತಿ ಕಷ್ಟಕರವಾಗಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಬಿಜೆಪಿಯ 25 ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು. ರಾಜಕೀಯ ಮರೆತು ರಾಜ್ಯದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಾವಣಗೆರೆ: ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ 2,800 ರೂ. ಏರಿಕೆ: ರೈತರ ಮುಖದಲ್ಲಿ ಸಂತಸ



