ದಾವಣಗೆರೆ: ನೀರಾವರಿ ಇಲಾಖೆ ಅಧಿಕಾರಿಗಳು ಕೊಟ್ಟ ಮಾತಿನಂತೆ ಭದ್ರಾ ಡ್ಯಾಂನಿಂದ ನಾಲೆಗೆ ನೂರು ದಿನಗಳ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಬೆಳಗ್ಗೆಯಿಂದಲೇ ಶುರುವಾಗಿದ್ದು, ಜಯದೇವ ವೃತ್ತದಲ್ಲಿ ಜಮಾಯಿಸಿದ ರೈತರ ಬಂದ್ ಗೆ ಸಾಥ್ ನೀಡುವಂತೆ ಮನವಿ ಮಾಡಿದರು.
ಬೆಳಿಗ್ಗೆ 7.30ಕ್ಕೆ ನಗರದ ಜಯದೇವ ವೃತ್ತದಲ್ಲಿ ಸೇರಿದ ರೈತ ಮುಖಂಡ ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪಿಬಿ ರಸ್ತೆ, ಹದಡಿ ರಸ್ತೆ, ಎಪಿಎಂಸಿ, ಹಳೇ ದಾವಣಗೆರೆಯಲ್ಲಿ ಬೈಕ್ ಮೂಲಕ ತೆರಳಿದ ರೈತರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ರೈತ ಒಕ್ಕೂಟ ಕರೆ ನೀಡಿರುವ ಬಂದ್ ಗೆ ಬಿಜೆಪಿ, ಆಪ್ , ಜೆಡಿಎಸ್ ಸೇರಿದಂತೆ, ಕಾರ್ಮಿಕರು, ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್ ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚುಸಿವೆ. ನಗರದ ಎಪಿಎಂಸಿ ಸಂಪೂರ್ಣ ಬಂದ ಆಗಿದೆ.
ಭದ್ರಾ ಅಚ್ಚುಕಟ್ಟಿನ ಪ್ರಮುಖ ಬೆಳೆಯಾದ ಭತ್ತಕ್ಕೆ ನಿರಂತರ 100 ದಿನ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟೇಲೆಯೇ ರೈತರು ಭತ್ತ ನಾಟಿ ಮಾಡಿದ್ದಾರೆ. ಇದೀಗ ಏಕಾಏಕಿ ನಾಲೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಡ್ಯಾಂನಿಂದ ನೀರು ಹರಿಸುವ ಪ್ರಮುಖ ಬೇಡಿಕೆ ಜತೆ ಇತರೆ ಬೇಡಿಕೆ ಈಡೇರಿಸುವಂತೆಯೂ ರೈತರು ಆಗ್ರಹಿಸಿದ್ದಾರೆ. ರೈತರ ಇತರೆ ಈ ರೀತಿ ಇವೆ.
- ದಾವಣಗೆರೆ ಕೃಷಿ ಉತ್ಪನ್ನ ಮಾರಾಕಟ್ಟೆ ರೈತ ಭವನದ ಕಾಂಪೌಂಡ್ ಅನ್ನು ಈ ಹಿಂದಿನ ಎಪಿಎಂಸಿ ಕಾರ್ಯದರ್ಶಿ ಅಕ್ರಮವಾಗಿ ಕೆಡವಿದ್ದು ಖಂಡನೀಯ. ತಕ್ಷಣ ಕಾಂಪೌಂಡ್ ಪುನರ್ ನಿರ್ಮಾಣ ಮಾಡಿಕೊಡಬೇಕು
- ಬರಪೀಡಿತ ಪಟ್ಟಿಯಲ್ಲಿರುವ ದಾವಣಗೆರೆ ಜಿಲ್ಲೆಗೆ ಬೆಳೆ ಪರಿಹಾರವಾಗಿ ಎಕರೆಗೆ 25,000 ರೂಪಾಯಿ ಘೋಷಿಸಿಬೇಕು ಜೊತೆಗೆ ಜನ – ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು
ಕಲ್ಪಿಸಿಕೊಡಬೇಕು - ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರಬ 7 ಗಂಟೆ ವಿದ್ಯುತ್ ಪೂರೈಸಬೇಕು
- ಅಕ್ರಮ – ಸಕ್ರಮ ಅಡಿಯಲ್ಲಿ ಹಣ ಕಟ್ಟಿರುವ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸುಟ್ಟುಹೋದ T.C ಗಳನ್ನು ಬದಲಿಸಿ ತಕ್ಷಣವೇ ಹೊಸ T.C ಹಾಕಿಸಿಕೊಡಬೇಕು
- ರೈತರ ಬ್ಯಾಂಕ್, ಸಹಕಾರಿ ಸಂಸ್ಥೆ, ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ , ಖಾಸಗಿ ಫೈನಾನ್ಸ್ ಗಳ ಎಲ್ಲಾ ಸಾಲ ವಸೂಲಾತಿ ತಡೆಹಿಡಿಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು
ರೈತ ಮುಖಂಡ ಕೊಳೇನಹಳ್ಳಿ ಬಿ. ಎಂ. ಸತೀಶ್, ಕುಂದುವಾಡದ ಅಣ್ಣಪ್ಪ ಬೆಳವನೂರು ಬಿ. ನಾಗೇಶ್ವರ ರಾವ್ , ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಕಲ್ಲಿಂಗಪ್ಪ, ಬಸವರಾಜ್, ಮೋಹನ್ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.



