ದಾವಣಗೆರೆ: ಯಾವುದೇ ಸೂಚನೆ ನೀಡದೆ ಏಕಾಏಕಿ ಭದ್ರಾ ಜಲಾಶಯದ ಬಲ ದಂಡೆ ನಾಲೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ನಿರಂತರ 100 ದಿನ ನೀರು ಕೊಡುವ ಭರವಸೆ ನಂಬಿ ಭತ್ತ ನಾಟಿ ಮಾಡಿದ ರೈತರು ಇದೀಗ ಕಂಗಾಲು ಆಗಿದ್ದಾರೆ. ಡ್ಯಾಂ ನಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸುತ್ತಿದ್ದಂತೆ ದಾವಣಗೆರೆ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸಕ್ಕೆ ರೈತ ಮುಖಂಡರು, ಹರಿಹರ ಶಾಸಕ ಬಿ.ಪಿ.ಹರೀಶ್, ದಾವಣಗೆರೆ, ಮಲೇಬೆನ್ನೂರು ಭಾಗದ ರೈತರು ಸಚಿವ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಆಗಮಿಸಿ, ನೀರು ನಿಲ್ಲಿಸುವ ನಿರ್ಧಾರ ಪುನರ್ ಪರಿಶೀಲಿಸುವಂತೆ ಆಗ್ರಹಿಸಿದರು.
ನೂರು ದಿನಗಳ ಕಾಲ ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು. ಶಿವಮೊಗ್ಗದಲ್ಲಿ ನಡೆದ ಕಾಡಾ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೂ ಸಹ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡುತ್ತೇವೆ. ಯಾವ ರೈತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ನಡೆಯಬೇಕು. ಎಡದಂಡೆ, ಬಲದಂಡೆ ಎಂಬ ತಾರತಮ್ಯ ಮಾಡದೇ ಎಲ್ಲಾ ರೈತರ ಹಿತ ಕಾಪಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದು 100 ದಿನ ನೀರು ಹರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದರು
ರೈತರ ಒತ್ತಡ ಹೆಚ್ಚಾಗುತ್ತಿದ್ದಂತೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಕಾಡಾ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು. ಏಕಾಏಕಿ ಯಾವುದೇ ಸೂಚನೆ ನೀಡದೇ ನೀರು ನಿಲ್ಲಿಸಿದರೆ ಹೇಗೆ..? ಎಂದು ತರಾಟೆ ತೆಗೆದುಕೊಂಡರು. ಹಾಗೆಯೇ ಶಿವಮೊಗ್ಗ ಉಸ್ತುವಾರಿ ಸಚಿವರಿಗೆ ಫೋನ್ ಮಾಡಿ ಮಾತನಾಡಿದರು.
ಭದ್ರಾ ಜಲಾಶಯದಿಂದ ನೀರು ಹರಿಸುವ ನಿರ್ಧಾರ ಘೋಷಿಸುತ್ತಿದ್ದಂತೆ ರೈತರು ಭತ್ತದ ನಾಟಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯು ಹೆಚ್ಚಾಗಿ ಭದ್ರಾ ಜಲಾಶಯದ ನೀರು ಅವಲಂಬಿಸಿದೆ. ಸಾವಿರಾರು ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಈಗ ಕಟ್ ಆಫ್ ಪದ್ಧತಿಯಡಿ ನೀರು ಹರಿಸುವುದಾಗಿ ಹೇಳಿ ನೀರು ಬಂದ್ ಮಾಡಲಾಗಿದೆ. ಇದರಿಂದ ರೈತರು ಏನು ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರನ್ನು ಪ್ರಶ್ನಿಸಿದರು.
ಸರಿಯಾಗಿ ಮಳೆ ಬಾರದ ಕಾರಣ ಮೆಕ್ಕೆಜೋಳ ಬೆಳೆ ಒಣಗಿ ಹೋಗಿ ಕೋಟ್ಯಂತರ ರೂಪಾಯಿ ನಷ್ಟವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ನೀರು ಹರಿಸದಿದ್ದರೆ ಭತ್ತ ಬೆಳೆಯುವವರ ಪರಿಸ್ಥಿತಿಯೂ ಇದೇ ಆಗುತ್ತದೆ. ಮಳೆ ಬಂದರೆ ಸಮಸ್ಯೆಯಾಗುವುದಿಲ್ಲ. ಆದರೆ ಈಗ 2600 ಕ್ಯೂಸೆಕ್ ನೀರನ್ನು ಬಲದಂಡೆ ನಾಲೆಯಲ್ಲಿ ಹರಿಸಲಾಗುತ್ತಿದೆ. ಬೇಕಾದರೆ 500 ಕ್ಯೂಸೆಕ್ ಕಡಿಮೆ ಮಾಡಿ ನೀರು ಹರಿಸಿ ಎಂದು ಜಲ ಸಂಪನ್ನೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಮಲ್ಲಿಕಾರ್ಜುನ್ ಅವರ ಮನವಿಗೆ ಡಿ.ಕೆ.ಶಿವಕುಮಾರ್ ಸ್ಪಂದಿಸಿದ್ದು, ಈ ಬಗ್ಗೆ ಜಲಸಂಪನ್ಮೂಲ ಇಲಾಖೆ, ಕಾಡಾ ಅಧಿಕಾರಿಗಳು, ಭದ್ರಾ ಡ್ಯಾಂ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಕ್ಯೂಸೆಕ್ ಕಡಿಮೆ ಮಾಡಿ ನೀರು ಹರಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ ಇದುವರೆಗೆ ಆದೇಶ ಆಗಿಲ್ಲ. ಡಿ.ಕೆ. ಶಿವಕುಮಾರ್ ಭರವಸೆ ಕೊಟ್ಟಿರುವ ಕಾರಣದಿಂದ ಇನ್ನು ನಾಲ್ಕೈದು ದಿನಗಳೊಳಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ಬಾರಿ ತೀವ್ರ ಮಳೆ ಕೊರತೆಯಿಂದ 186 ಅಡಿ ಇರುವ ಡ್ಯಾಂ 167 ಅಡಿ ಮಾತ್ರ ತುಂಬಿತ್ತು. ಸದ್ಯ 161 ಅಡಿ ನೀರು ಇದೆ. ಶಿವಮೊಗ್ಗ, ಭದ್ರಾವತಿ ಭಾಗದ ರೈತರ ಬೇಸಿಗೆಯಲ್ಲಿ ತೋಟಕ್ಕೆ ನೀರು ಬೇಕು, ಹೀಗಾಗಿ ಈಗ ಡ್ಯಾಂನಿಂದ ನೀರು ಹರಿಸುವುಧನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಇಲಾಖೆ ಭರವಸೆ ಮೆರೆಗೆಯೇ ದಾವಣಗೆರೆ ಜಿಲ್ಲೆ ರೈತರು ನಾಟಿ ಮಾಡಿದ್ದು, ಕೊಟ್ಟ ಮಾತಿನಂತೆ ನಿರಂತರ ನೀರು ಹರಿಸಿ ಎಂದು ದಾವಣಗೆರೆ ರೈತರ ಮನವಿಯಾಗಿದೆ.
ದಾವಣಗೆರೆ: ರೈಲ್ವೆ ಹಳಿ ದಾಟುವಾಗ ಎಡವಿ ಬಿದ್ದ ಶಿಕ್ಷಕ; ದಿಢೀರ್ ಬಂದ ರೈಲು- ಹಳಿ ಮಧ್ಯೆಯೇ ಮಲಗಿ ಪ್ರಾಣ ಉಳಿಸಿಕೊಂಡ ಶಿಕ್ಷಕ…!
ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಸೆ.20ರವರೆಗೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ದಾವಣಗೆರೆ: ಇಂದಿನ ಹೊಸ, ಹಳೆಯ ರಾಶಿ, ಬೆಟ್ಟೆ ಅಡಿಕೆ ಬೆಲೆ ಎಷ್ಟಿದೆ..? ಇಲ್ಲಿದೆ ಮಾಹಿತಿ..