ನವದೆಹಲಿ: ಗೃಹ ಬಳಕೆಯ ಎಲ್ಲಾ ಅಡುಗೆ ಅನಿಲ ಸಿಲಿಂಡರ್ (ಎಲ್ಪಿಜಿ ) ಬೆಲೆಯಲ್ಲಿ 200 ರೂ.ವರೆಗೆ ಕಡಿತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರದ ಈ ನಿರ್ದಾರದಿಂದ ಉಜ್ವಲ ಯೋಜನೆಯಡಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚುವರಿ 200 ರೂ. ಸಬ್ಸಿಡಿಯಿಂದ ಒಟ್ಟು 400 ರೂ.ಸಬ್ಸಿಡಿ ಸಿಗುವಂತಾಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಅವರು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ₹ 200 ಕಡಿತವನ್ನು ನಿರ್ಧರಿಸಿದ್ದಾರೆ. ಇದು ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಉಡುಗೊರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಪೆಟ್ರೋಲಿಯಂ ಕಂಪನಿಗಳು 14 ಕೆಜಿ ಗೃಹೋಪಯೋಗಿ ಮತ್ತು 19 ಕೆಜಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲನೆಯ ದಿನ ನಿಗದಿಪಡಿಸುತ್ತವೆ.ಆಗಸ್ಟ್ ಒಂದರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 100 ರೂ.ಕಡಿತಗೊಳಿಸಿದ್ದವು, ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಪ್ರಸ್ತುತ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 1103 ರೂ, ಮುಂಬೈನಲ್ಲಿ 1102.50, ಕೋಲ್ಕತ್ತಾದಲ್ಲಿ 1129 ಮತ್ತು ಚೆನ್ನೈನಲ್ಲಿ 1118.50 ರೂ. ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್ಪಿಜಿ ಬೆಲೆಯನ್ನು ಬದಲಾಯಿಸುತ್ತವೆ. 200 ಇಳಿಕೆಯಾದರೆ, ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 903 ರೂ. ಆಗುತ್ತದೆ. ಸಬ್ಸಿಡಿ ಪಡೆಯಲು ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಪಿಜಿ ಸಂಪರ್ಕದೊಂದಿಗೆ ಲಿಂಕ್ ಮಾಡಬೇಕು.