ದಾವಣಗೆರೆ: ರಾಜ್ಯದಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಅಂದುಕೊಂಡಿದ್ದೆವು. ಈಗ ಬಿಜೆಪಿಯೇ ರಾಜ್ಯದದಿಂದ ಮುಕ್ತ ಆಗೋ ಪರಿಸ್ಥಿತಿ ಬಂದಿದೆ ಎಂದು ಮಾಜಿ ಎಂ.ಪಿ. ರೇಣುಕಾಚಾರ್ಯ ತಮ್ಮದೇ ಪಕ್ಷದ ವಿರುದ್ಧ ಕಿಡಿಕಾರಿದರು.
ಹೊನ್ನಾಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡಿದ್ದೇ ರಾಜ್ಯದಲ್ಲಿ ಬಿಜೆಪಿಯ ಅವನತಿಗೆ ಪ್ರಮುಖ ಕಾರಣ.ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಅನ್ನೋದೇ ಇಲ್ಲ. ಬಿಜೆಪಿಯನ್ನು ಯಾರೋ, ಎಲ್ಲೋ ಕುಳಿತು ನಿಯಂತ್ರಿಸುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರಿದರೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ ಎಂದರು.
ನಮ್ಮ ಪಕ್ಷದ ಕೆಲವು ನಾಯಕರು ಭ್ರಮಾಲೋಕದಲ್ಲಿದ್ದಾರೆ. ಅವರು ಭ್ರಮಾಲೋಕ ಬಿಟ್ಟು ಹೊರ ಬರಬೇಕು. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. 72 ಹೊಸ ಮುಖಗಳಿಗೆ ಟಿಕೆಟ್ ಕೊಡುವ ಅವಶ್ಯಕತೆ ಏನಿತ್ತು?
ಹಿರಿಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಅವರನ್ನು ಕಡೆಗಣಿಸಿದರು ಎಂದರು.
ಕಾಂಗ್ರೆಸ್ ಸರ್ಕಾರ ಬಂದು ನೂರು ದಿನತುಂಬಿದರೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ.ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಗಿದು 2 ವರ್ಷ ಆಗಿದೆ. ಇದುವರೆಗೂ ರಾಜ್ಯಾಧ್ಯಕ್ಷರ ಆಯ್ಕೆಯಾಗಿಲ್ಲ.ಯಡಿಯೂರಪ್ಪ ಅವರನ್ನು ನಾಮ್ ಕೇ ವಾಸ್ತೇ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ.ಯಡಿಯೂರಪ್ಪ ಅವರಿಗೆ ಯಾವುದೇ ಗೌರವ ನೀಡಿಲ್ಲ ಎಂದರು.
ಇನ್ನೂ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಹೆಅರು ಹೇಳದೇ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮಹಾನಾಯಕ. ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರಿದ್ದರೂ ಜಿಲ್ಲಾ ಉಸ್ತುವಾರಿ ನಮಗೆ ಕೊಡಲಿಲ್ಲ. 5 ಜನರಲ್ಲಿ ಯಾರಿಗಾದರೂ ಸಚಿವರನ್ನಾಗಿ ಮಾಡಿ ಅಂತ ಕೇಳಿಕೊಂಡೆವು. ಆ ಮಹಾನಾಯಕ ತನ್ನ ಪ್ರಭಾವ ಕಡಿಮೆ ಆಗುತ್ತೆ ಎಂದು ತಡೆದರು ಎಂದು ಕಿಡಿಕಾರಿದರು.