ದಾವಣಗೆರೆ: ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅಮೆರಿಕಾದಲ್ಲಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ತನ್ನ ಪತ್ನಿ,ಮಗುವಿಗೆ ಗುಂಡಿಟ್ಟು ಕೊಲೆ ಮಾಡಿ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.
ದಾವಣಗೆರೆ ಮೂಲದ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ದಂಪತಿ ಹಾಗೂ ಮಗು ಅಮೆರಿಕಾದ ಮೇರಿಲ್ಯಾಂಡ್ ನ ಬಾಲ್ಟಿಮೋರ್ ನಲ್ಲಿ ವಾಸವಾಗದ್ದು, ನಿಗೂಢವಾಗಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಯೋಗೇಶ್ ಹೊನ್ನಾಳ (37), ಪ್ರತಿಭಾ (35) ಹಾಗೂ ಯಶ್ (6) ಮೃತರಾಗಿದ್ದಾರೆ.
ಕಳೆದ 9 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಾಗಿದ್ದ ಯೋಗೇಶ್ ಹಾಗೂ ಪತ್ನಿ ಪ್ರತಿಭಾ ಇಬ್ಬರೂ ಇಂಜಿನಿಯರ್ ವೃತ್ತಿಯಲ್ಲಿದ್ದರು. ಬಾಲ್ಟಿಮೋರ್ ನಲ್ಲಿ ಮನೆಯನ್ನು ಖರೀದಿಸಿ 6 ವರ್ಷದ ಮಗನೊಂದಿಗೆ ವಾಸವಾಗಿದ್ದರು.
ಯೋಗೇಶ್ ತನ್ನ ಪತ್ನಿ ಹಾಗೂ ಮಗನಿಗೆ ಗುಂಡಿಟ್ಟು ಹತ್ಯೆ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಯೋಗೇಶ್ ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ದಾವಣಗೆರೆಯಲ್ಲಿರುವ ಯೋಗೇಶ್ ಕುಟುಂಬ, ಅಮೆರಿಕಾದಲ್ಲಿ ದಂಪತಿ, ಮಗುವಿನ ಸಾವಿನ ನಿಖರ ಕಾರಣ ತಿಳಿಸಿ, ಮೃತದೇಹವನ್ನು ದಾವಣಗೆರೆಗೆ ಕರೆತರುವ ವ್ಯವಸ್ಥೆ ಮಾಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದೆ.



