ಡಿವಿಜಿ ಸುದ್ದಿ, ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 3 ಸಚಿವ ಸ್ಥಾನ ನೀಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದ ಶ್ರೀ ವಚನಾಂದ ಸ್ವಾಮೀಜಿಗಳು, ನಿನ್ನೆಯ ಘಟನೆಯಿಂದ ಭಕ್ತ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.
ನಿನ್ನೆ ಅಥವಾ ಇಂದಿನ ಕಾರ್ಯಕ್ರಮದಲ್ಲಿ ಏನಾದರು ನಮ್ಮಿಂದ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರಲ್ಲಿ ಮನವಿ ಮಾಡಿದರು.
ಬುಧವಾರ ಹರಿಹರದ ಪಂಚಮಸಾಲಿ ಗುರುಪೀಠ ಆಯೋಜಿಸಿದ್ದ ಪ್ರಥಮ ಹರಜಾತ್ರೆ ಮಹೋತ್ಸವ ಮತ್ತು ಸಂಘದ ಬೆಳ್ಳಿ ಬೆಡಗು ಕಾರ್ಯಕ್ರಮದಲ್ಲಿ, ಈ ಬಾರಿ ಸಮಾಜವನ್ನುನೀವು ಕೈ ಹಿಯದಿದ್ದರೆ (ಸಚಿವ ಸ್ಥಾನ ನೀಡದಿದ್ದರೆ), ಮುಂದೆ ಸಮಾಜ ನಿಮ್ಮನ್ನು ಕೈ ಬಿಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಸಿಎಂ ಬಿಎಸ್ ವೈ ಸಿಡಿಮಿಡಿಗೊಂಡಿದ್ದರು.
ನಿನ್ನೆ ನಡೆದ ಘಟನೆಯಿಂದ ಜಾತ್ರೆಯಲ್ಲಿ ಭಕ್ತರ ಆಗಮನ ಕೂಡ ಕ್ಷೀಣಿಸಿತ್ತು. ಇಂದು ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಪಂಚಮಸಾಲಿ ಗುರುಪೀಠದೊಂದಿಗೆ ತಾವು ಸದಾ ಇರುವುದಾಗಿ ಹೇಳಿದರು.



