ದಾವಣಗೆರೆ: ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಖ್ಯಾತಿ ಜಿಲ್ಲೆಯ ಸೂಳೆಕೆರೆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ಹಿನ್ನೆಲೆ ಜಿಲ್ಲಾಡಳಿತವು ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಸೂಳೆಕೆರೆಯಿಂದ ಚಿತ್ರದುರ್ಗ, ಚನ್ನಗಿರಿ ಹೊಳಲ್ಕೆರೆ ಜಗಳೂರು ಸೇರಿದಂತೆ 612 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು.
ಕೆರೆ ನೀರು ಕಲುಷಿತವಾಗಿ ಮತ್ತು ಬೇರೆ ಬಣ್ಣಕ್ಕೆ ತಿರುಗಿದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪ್ರಯೋಗಾಲಯವು ಕೆರೆಯ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಸೂಳೆಕೆರೆ ನೀರು ಪೂರೈಕೆ ಸ್ಥಗಿತಗೊಳಿಸಿದೆ.
ಸೂಳೆಕೆರೆಯಿಂದ ನೀರು ಪೂರೈಕೆ ಮಾಡುವ ನೀರು ಶುದ್ಧೀಕರಣ ಘಟಕದಲ್ಲಿ ಫಿಲ್ಟರ್ಗಳು ಹಾಳಾಗಿದ್ದರೂ ನೀರು ಪೂರೈಕೆ ಮಾಡಿದ್ದರಿಂದ ಸಮಸ್ಯೆಯಾಗಿದೆ.ಪ್ರಸ್ತುತ ನೀರು ಪೂರೈಕೆ ಸ್ಥಗಿತಗೊಳಿಸಿದ್ದು, ಫಿಲ್ಟರ್ ಅಳವಡಿಸಲಾಗುವುದು. ನೀರು ಶುದ್ಧೀಕರಣವಾದ ಬಳಿಕ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಸಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ಬೋರ್ ವೆಲ್ ಹಾಗೂ ಭದ್ರಾ ನಾಲೆಯ ಪಂಪ್ ಹೌಸ್ ನಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತ್ ಸಿಇಒ ಸುರೇಶ ಇಟ್ನಾಳ್ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್ ಸೂಳೆಕೆರೆಯ ನೀರು ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿದ್ದರು.



