ದಾವಣಗೆರೆ: ಮೂರು ವರ್ಷದ 600 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಮಚ್ಚಿನಿಂದ ಕಡಿದು ಹಾಕಿ ಪರಾರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮದ ದರಿಯಪ್ಪರ ಬೀರಪ್ಪ ಎಂಬ ರೈತನ ಜಮೀನಿನಲ್ಲಿ ಈ ಘಟನೆ ನಡೆದಿದೆ. ಒಂದೂವರೆ ಎಕರೆ ಜಮೀನಿನಲ್ಲಿ 3 ವರ್ಷದ ಸುಮಾರು 600 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಕಷ್ಟಪಟ್ಟು ಮಕ್ಕಳಂತೆ ಸಾಕಿದ್ದ ಅಡಿಕೆ ಮರ ಕಡಿದು ಹಾಕಿದ್ದನ್ನು ಕಂಡು ರೈತ ಕಂಗಲಾಗಿದ್ದಾನೆ. ಕೂಡಲೇ ದುಷ್ಕರ್ಮಿಗಳನ್ನು ಹಿಡಿದು, ಮುಂದೆ ಇಂತಹ ಕೃತ್ಯ ಎಸಗದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಹದಡಿ ಜಿ.ಸಿ.ನಿಂಗಪ್ಪ, ಆರನೇಕಲ್ಲು ವಿಜಯಕುಮಾರ ಆಗ್ರಹಿಸಿದ್ದಾರೆ.
ಜಮೀನಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ., ತಹಶೀಲ್ದಾರ್ ಡಾ.ಅಶ್ವಥ್, ಕಂದಾಯ ನಿರೀಕ್ಷಕ ಬಸವರಾಜು, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಪವನ್ ಕುಮಾರ್ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಪ್ರಗತಿಯಲ್ಲಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



