ದಾವಣಗೆರೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾದ ಬಜೆಟ್ ಅಕ್ಬರ್, ಆಂಟೋನಿ ಫುಲ್ ಖುಷ್, ಅಮರ್ ಮಟಾಷ್…ಎನ್ನುವಂತಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಐದು ಗ್ಯಾರಂಟಿ ಸರಿಯಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಅವರೇ ಗೊಂದಲದಲ್ಲಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್, ಸರ್ಕಾರಿ ವೈದ್ಯಕೀಯ ಕಾಲೇಜು ಯಾವುದನ್ನೂ ಕೊಟ್ಟಿಲ್ಲ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡಬೇಕಿತ್ತು ಎಂದರು.
ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನೇರ ರೈಲು ಮಾರ್ಗ ಮಾಜಿ ಸಂಸದ ಜನಾರ್ದನ ಸ್ವಾಮಿ ಅವರ ಅವಧಿಯಲ್ಲೇ ಆಗಬೇಕಿತ್ತು. 15 ವರ್ಷಗಳಾದರೂ ಆಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡು ಅನುದಾನ ಬಿಡುಗಡೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭೂ ಸ್ವಾಧೀನ ನಡೆಯಬೇಕಿದೆ.ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ನಾನು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ ಎಂದರು.



