ದಾವಣಗೆರೆ: ರೇಣುಕಾಚಾರ್ಯ ಲೋಕಸಭೆಗೆ ಸ್ಪರ್ಧೆ ಮಾಡಿದ್ರೆ, ಅವರ ಸ್ಥಾನಕ್ಕೆ ನಾನು ಹೋಗುತ್ತೇನೆ. ಗೆದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಂತ್ರಿ ಏನು ಮುಖ್ಯಮಂತ್ರಿನೂ ಆಗುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಆಸೆ ಇದ್ದರೆ ಸ್ಪರ್ಧಿಸಲಿ. ಅವರು ಎಂಪಿ ಸ್ಥಾನಕ್ಕೆ ನಿಂತರೆ ಹೊನ್ನಾಳಿಯಲ್ಲಿ ಶಾಸಕ ಸ್ಥಾನ ಖಾಲಿ ಆಗುತ್ತದೆ. ನಾನು ಅಲ್ಲಿಗೆ ಹೋಗುತ್ತೇನೆ. ನಾನು ರೇಣುಕಾಚಾರ್ಯ ಅವರಿಗೆ ಎಂಪಿಗೆ ಶಿಫಾರಸು ಮಾಡುತ್ತೇನೆ. ಅವರು ನನಗೆ ಎಂಎಲ್‌ಎ ಸ್ಥಾನಕ್ಕೆ ಶಿಫಾರಸು ಮಾಡಲಿ ಎಂದರು.
ಹೊನ್ನಾಳಿಯಿಂದ ಸ್ಪರ್ಧಿಸುವಂತೆ ಸಾಕಷ್ಟು ಒತ್ತಡ ಇದೆ. ಅಲ್ಲಿ ನಮ್ಮವರು ಬೇಕಾದಷ್ಟು ಜನರು ಇದ್ದಾರೆ. ಹೊನ್ನಾಳಿಯಿಂದ ಗೆದ್ದೇ ಗೆಲ್ಲುತ್ತೇನೆ ಮಂತ್ರಿಯೇನು ಮುಖ್ಯಮಂತ್ರಿಯೂ ಆಗುತ್ತೇನೆ. ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರಿಗೆ ಆಸೆ ಇದ್ದರೆ ಸ್ಪರ್ಧಿಸಲಿ. ಆಕಾಂಕ್ಷಿ ಎಂದು ಹೇಳಿಕೊಳ್ಳುವುದು ತಪ್ಪೇನು ಅಲ್ಲ. ಪಕ್ಷ ರೇಣುಕಾಚಾರ್ಯಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ಪಕ್ಷದ ತೀರ್ಮಾನವೇ ಮುಖ್ಯವಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದರು.



