ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ಅಂತಿಮ ವರ್ಷದ 48 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. 97 ಜಾಬ್ ಆಫರ್ಸ್ ಇದುವರೆಗೂ ಸ್ವೀಕರಿಸಿದ್ದು, ಕೆಲವು ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಜಾಬ್ ಆಫರ್ಸ್ ಸ್ವೀಕರಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳು ದೊರೆಯುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಉತ್ತಮವಾಗಿದ್ದರೆ ಜಾಬ್ ಗಿಟ್ಟಿಸಿಕೊಳ್ಳುವುದು ಕಷ್ಟಕರವೇನಲ್ಲ ಎಂದು ವಿಭಾಗದ ನಿರ್ದೇಶಕ ಡಾ . ಬಿ.ಬಕ್ಕಪ್ಪ ತಿಳಿಸಿದರು.
ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಪ್ರಾರಂಭದಿಂದಲೂ ಅನೇಕ ಕೌಶಲ್ಯ ವೃದ್ಧಿ ತರಬೇತಿಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ತಕ್ಕಂತೆ ತರಬೇತಿಗೊಳಿಸಲಾಗುತ್ತಿದೆ ಎಂದು ವಿಭಾಗದ ಮುಖ್ಯಸ್ಥ ಡಾ ಬಸವರಾಜು ಪಿ ಎಸ್ ತಿಳಿಸಿದರು.
ಎಂಬಿಎ ವಿದ್ಯಾರ್ಥಿಗಳು ಇದುವರೆಗೂ ಕಂಪನಿಗಳಾದ ಫೋಕಸ್ ಎಜುಮ್ಯಾಟಿಕ್ಸ್, ಸ್ಕಿಲ್ ವರ್ಟೆಕ್ಸ್, ಐಸಿಐಸಿಐ ಬ್ಯಾಂಕ್, ಫಂಡ್ಸ್ರೂಮ್, ಎಚ್ ಡಿ ಎಫ್ ಸಿ ಬ್ಯಾಂಕ್, ಇಂಟೆಲಿಪಾತ್, ಡಿ ಮಾರ್ಟ್, ಭಾರತಿ ಏರ್ಟೆಲ್ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಇನ್ನು ಹಲವು ಕಂಪನಿಗಳ ಸಂದರ್ಶನ ಪ್ರಕ್ರಿಯೆ ಬಾಕಿ ಇದ್ದು, ಎಲ್ಲಾ ವಿದ್ಯಾರ್ಥಿಗಳು ಆಯ್ಕೆಯಾಗಲಿದ್ದಾರೆ ಮತ್ತು ಶೇಕಡ ನೂರರ ಪ್ಲೇಸ್ಮೆಂಟ್ ಆಗಲಿದೆಯೆಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ವೈ. ಯು. ಸುಭಾಷ್ ಚಂದ್ರ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿದ್ದಾರೆ.



