ಚನ್ನಗಿರಿ:ದರೋಡೆಕೋರರ ತಂಡವೊಂದು ಕಾರು ಅಡ್ಡಗಟ್ಟಿ 95 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಬುಕ್ಕಾಂಬೂದಿ ಕೆರೆಯ ಬಳಿ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 18ರಂದು ನಡೆದಿದ್ದು, ಈ ಬಗ್ಗೆ ಜೂ.28ರಂದು ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.ದುಬೈನಲ್ಲಿ ಆಯಿಲ್ ವ್ಯಾಪಾರದಲ್ಲಿ ತೊಡಗಿರುವ ನಬೀಲ್ಕೆ ಅವರು ದೂರು ನೀಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಾನೆ ಗುರೂಜಿ ಎಂಬ ಪಟ್ಟಣದಲ್ಲಿ ಎನ್.ಕೆ. ಬಂಗಾರದ ಅಂಗಡಿ ಹೊಂದಿದ್ದೇವೆ. ನಮ್ಮ ಕುಟುಂಬ ಮಡಿಕೇರಿ ಜಿಲ್ಲೆ ವಿರಾಜಪೇಟೆಯಲ್ಲಿ ವಾಸವಾಗಿದ್ದು ಅಲ್ಲಿ ಬಂಗಾರದ ಅಂಗಡಿಯನ್ನು ತೆರೆಯುವ ಉದ್ದೇಶದಿಂದ ಸಾನೆಗುರೂಜಿ ಪಟ್ಟಣದಲ್ಲಿದ್ದ ಬಂಗಾರದ ಅಂಗಡಿ ಆಭರಣ ಮಾರಾಟ ಮಾಡಿ 95 ಲಕ್ಷ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣವನ್ನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿಲೇಶ್ ಹಾಗೂ ಅಭಿಜಿತ್ ಎಂಬುವವರು ತೆಗೆದುಕೊಂಡು ವಿರಾಜಪೇಟೆಗೆ ಹೋಗುತ್ತಿದ್ದರು. ಬುಕ್ಕಾಂಬೂದಿ ಕೆರೆಯ ಬಳಿ ಜೂನ್ 18ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ 10ರಿಂದ 15 ಜನರಿದ್ದ ದರೋಡೆಕೋರರ ಗುಂಪು ಕಾರನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ನಿಲೇಶ್ ಅವರನ್ನು ಬೆಂಗಳೂರಿನ ಬಳಿ ಹಾಗೂ ಅಭಿಜಿತ್ನನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಬಿಟ್ಟು ಹೋಗಿದ್ದಾರೆ. ದುಬೈನಿಂದ ಬರಲು ವಿಮಾನದ ಟಿಕೆಟ್ ಸಿಗದ ಹಿನ್ನೆಲೆ ತಡವಾಗಿ ದೂರು ನೀಡುತ್ತೇನೆ ಎಂದಿದ್ದಾರೆ.ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಯನ್ನು ಅಜ್ಜಂಪುರ ಠಾಣೆಗೆ ವರ್ಗಾಯಿಸಲಾಗಿದೆ.