ದಾವಣಗೆರೆ; ನಿನ್ನೆ(ಜೂ.20) ಸಂಜೆ ಜಿಲ್ಲೆಯ ಹರಿಹರ, ಚನ್ನಗಿರಿ, ಹೊನ್ನಾಳಿ ತಾಲ್ಲೂಕಿನ ಕೆಲವಡೆ ವರುಣ ಅಬ್ಬರಿಸಿದ್ದಾನೆ. ಸತತ ಎರಡು ಗಂಟೆ ವರೆಗೆ ಜೋರು ಮಳೆಯಾಗಿದ್ದು, ರೈತರ ಬಿತ್ತನೆಗೆ ಹದವಾದ ಮಳೆಯಾಗಿದೆ. ಈ ಮಳೆಯಿಂದ ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂತಸ ಉಂಟು ಮಾಡಿದೆ.
ಚನ್ನಗಿರಿಯಲ್ಲಿ ಸತತ 2 ಗಂಟೆಗೂ ಹೆಚ್ಚು ಕಾಲ ಮುಂಗಾರು ಮಳೆ ಸುರಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ13 ಸೇರಿ ಪಟ್ಟಣದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ಚನ್ನಗಿರಿ ಪಟ್ಟಣದ ಕೃಷಿ ಇಲಾಖೆ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ13 ಹಾದು ಹೋಗಿದ್ದು, ಇಲ್ಲಿ ಸುಮಾರು 4ಅಡ್ಡಿಗೂ ಹೆಚ್ಚು ನೀರು ನಿಂತಿದ್ದರಿಂದ ವಾಹನ ಸವಾರು ರಸ್ತೆ ದಾಟಲು ಪರದಾಡಿದರು.
ಹರಿಹರ ತಾಲ್ಲೂಕಿನ ಹರಿಹರ ನಗರ, ಅಮರಾವತಿ, ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ, ಕುರುಬರಹಳ್ಳಿ ಸೇರಿ ವಿವಿಧ ಕಡೆ ಗುಡುಗು, ಸಿಡಿಲು ಸಹಿತ ಮಳೆರಾಯ ಅಬ್ಬರಿಸಿದ್ದಾನೆ. ಸಂಜೆ 6 ಗಂಟೆಗೆ ಶುರುವಾದ ಮಳೆ ಒಂದು ತಾಸು ಸತತ ಮಳೆಯಾಗಿದೆ ಜಮೀನಿನಲ್ಲಿ ನೀರು ಹರಿದಾಡುವ ರೀತಿ ಮಳೆಯಾಗಿದ್ದು,ಹದ ಮಳೆಯಾಗಿದೆ. ಈ ಮಳೆಯಿಂದ ಬಿಸಿಲಿನ ತಾಪಕ್ಕೆ ಕಾದಿದ್ದ ತುಸು ಭೂಮಿ ತಂಪಾಗಿದೆ.
ಹೊನ್ನಾಳಿ- ನ್ಯಾಮತಿ ತಾಲೂಕಿನಾದ್ಯ೦ತ ಮಿ೦ಚು, ಗುಡುಗು ಸಹಿತ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿದೆ. ಮಳೆಗಾಗಿ ಕಾಯುತ್ತಿದ್ದ ಅವಳಿ ತಾಲೂಕು
ರೈತ ಸಮುದಾಯ ಈಗ ತುಸು ನೆಮ್ಮದಿ ತಂದಿದೆ.



