ಬೆಂಗಳೂರು: ಜೂನ್ 8 ರಂದು ಕೇರಳಕ್ಕೆ ಪ್ರವೇಶಿಸಿದ್ದ ಮುಂಗಾರು ಮಳೆ, ಎರಡು ದಿನದ ನಂತರ ರಾಜ್ಯಕ್ಕೆ ಶನಿವಾರ( ಜೂ.11) ಎಂಟ್ರಿ ಕೊಟ್ಟಿದೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಪ್ರದೇಶಗಳಿಗೆ ಮಳೆ ವ್ಯಾಪಿಸಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜೂನ್ 11 ರಿಂದ 15 ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಸಾಧಾರಣ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಡಿಕೇರಿ, ಕಾರವಾರದವರೆಗೆ ಮುಂಗಾರು ಮಳೆ ವ್ಯಾಪಿಸಿದ್ದು ರಾಜ್ಯದ ಹಲವು ಪ್ರದೇಶಗಳಿಗೆ ವಿಸ್ತರಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.ಮುಂದಿನ ಐದು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.



