ದಾವಣಗೆರೆ: ಶಿಥಿಲಗೊಂಡಿದ್ದ ಕಬ್ಬಿಣದ ಗೇಟ್ ಗೋಡೆ ಕುಸಿದು ಬಿದ್ದು ಬಾಲಕನೊಬ್ಬ ದುರಂತ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದ ಬಸಾಪುರ ಗ್ರಾಮದಲ್ಲಿ ಸಂಭವಿಸಿದೆ. ಬಸಾಪುರ ಗ್ರಾಮದ ಪುರೋಹಿತ ಗುರುಶಾಂತಯ್ಯ ಎಂಬುವರ ಮಗ ನಾಗಾರ್ಜುನ (11ವರ್ಷ) ಮೃತ ಬಾಲಕ, 6ನೇ ತರಗತಿ ಓದುತ್ತಿದ್ದ ನಾಗಾರ್ಜುನ ತನ್ನ ಸ್ನೇಹಿತರೊ೦ದಿಗೆ ಆಟವಾಡಲು ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ ಸಿದ್ದಪ್ಪ ಎಂಬುವರ ಮನೆ ಕಾಂಪೌಂಡ್‌ಗೆ ಅಳವಡಿಸಿದ್ದ ಗೇಟ್ ಶಿಥಿಲಗೊಂಡಿದ್ದು, ಮಳೆಯಿಂದಾಗಿ ಅಲ್ಲಿಯೇ ಆಟವಾಡುತ್ತಿದ್ದ ಬಾಲಕ ನಾಗಾರ್ಜುನ ಮೇಲೆ ಬಿದ್ದಿದೆ. ಗೋಡೆ ಸಹಿತ ಬಾಲಕನ ಮೇಲೆ ಗೇಟ್ ಕುಸಿದು ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ನಾಗಾರ್ಜುನ ಸಾವನ್ನಪ್ಪಿದ್ದಾನೆ. ಬಾಲಕನ ಪೋಷಕರ ರೋಧನ ಮುಗಿಲು ಮುಟ್ಟುವಂತಿತ್ತು. ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.