ದಾವಣಗೆರೆ: ಪೊಲೀಸರ ಸೋಗಿನಲ್ಲಿ ನಗರದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆಯರ ಚಿನ್ನದ ಸರ ಪಡೆದು ವಂಚಸಿದ ಘಟನೆ ನಡೆದಿದೆ. ಒಂಟಿ ಮಹಿಳೆಯರೇ ಈ ಕಳ್ಳರ ಟಾರ್ಗೆಟ್ ಆಗುದ್ದು, ಪೊಲೀಸರ ಸೋಗಿನಲ್ಲಿ ಮಹಿಳೆಯರ ಬಂಗಾರದ ಒಡವೆಗಳನ್ನು ಪಡೆದು ವಂಚನೆ ಮಾಡಿದ್ದಾರೆ. ಈ ಬಗ್ಗೆ ಕೆಟಿಜೆ ನಗರ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸೋಗಿನಲ್ಲಿದ್ದ ತಂಡ 3 ಲಕ್ಷಕ್ಕೂ ಹೆಚ್ಚು ಮೌಲ್ಯದ 77 ಗ್ರಾಂ ಬಂಗಾರದ ಆಭರಣಗಳನ್ನು ಪಡದು ವಂಚಿಸಿದ್ದಾರೆ. ಗಣೇಶ ಲೇಔಟ್‌ನ ನಿವಾಸಿ ಬ್ರಮರಾಂಬ ಎಂಬ ಮಹಿಳೆ ವಂಚನೆಗೊಳಗಾಗಿದ್ದಾರೆ. ಜೂ.02ರಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವಾಗ ರಸ್ತೆಯಲ್ಲಿ ಬಂದ ಅಪರಿಚಿತರು, ನಾವು ಪೊಲೀಸರು.., ನೀವು ಈ ರೀತಿ ಬಂಗಾರದ ಆಭರಣ ಧರಿಸಿ ಓಡಾಡುವುದು ಸರಿಯಲ್ಲ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಿಮ್ಮ ಬಂಗಾರವನ್ನು ನಮಗೆ ನೀಡಿ ಸೀರೆ ಸೆರಗಲ್ಲಿ ಕಟ್ಟುತ್ತೇವೆ ಎಂದು ಹೇಳಿ ಬಂಗಾರ ಪಡೆದು ವಂಚಿಸಿದ್ದಾರೆ. ಮನೆಗೆ ಹೋಗಿ ನೋಡಿದಾಗ ಬಂಗಾರದಂತೆ ಕಾಣುವ ಒಂದು ಸರ ಹಾಗೂ ಕಲ್ಲು ಇದೆ. ಆಗ ನನಗೆ ವಂಚಿಸಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಿದ್ದವೀರಪ್ಪ ಬಡಾವಣೆಯ ನಿವಾಸಿ ಚಂದ್ರಕಲಾ ಎಂಬುವರಿಗೆ ವಂಚನೆ ನಡೆದಿದೆ. ಮನೆಯಿಂದ ಬೆಳಿಗ್ಗೆ ಶಾಮನೂರು ರಸ್ತೆಯ ನಂದಿನಿ ಆಸ್ಪತ್ರೆ ಬಳಿ ಹೋಗುತ್ತಿದ್ದಾಗ ಖಾಕಿ ಡ್ರಸ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಂದು ಕೊರಳಲ್ಲಿ ಮಾಂಗಲ್ಯದ ಸರ ಹಾಕಿಕೊಂಡು ಓಡಾಡಬೇಡಿ ಎಂದರು. ಬಳಿಕ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪ್ಯಾಕ್ ಮಾಡಿಕೊಡುತ್ತೇನೆ ಎಂದು ಹೇಳಿ ಬಂಗಾರ ಪಡೆದು ವಂಚಿಸಿದ್ದಾರೆ ಎಂದು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.