ಡಿವಿಜಿ ಸುದ್ದಿ, ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮಾಜದಿಂದ ಬಿಜೆಪಿ ಪಕ್ಷಕ್ಕೆ 15 ಶಾಸಕರನ್ನು ಆರಿಸಿ ಕಳುಹಿಸಲಾಗಿದೆ. ಸಮಾಜಕ್ಕೆ ಕನಿಷ್ಠ 3 ಸಚಿವ ಸ್ಥಾನ ನೀಡಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಶ್ರೀ ವಚನನಾಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಬಿಜೆಪಿ ಪಕ್ಷದಿಂದ 15 ಶಾಸಕರು ವಿಧಾಸಭೆ ಪ್ರವೇಶ ಪಡೆದಿದ್ದಾರೆ. ಈಗಾಗಲೇ ಒಂದು ಸಚಿವ ಸ್ಥಾನ ಕೊಟ್ಟಿದ್ದು, ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಇನ್ನು 2 ಸಚಿವ ಸ್ಥಾನ ನೀಡಬೇಕು. 5 ಶಾಸಕರಿಗೆ ಒಬ್ಬರಂತೆ ಕನಿಷ್ಠ 3 ಸಚಿವ ಸ್ಥಾನ ಕೊಡಬೇಕು ಅಂತ ಒತ್ತಾಯಿಸಿದರು.
ಸಮಾಜದ ಮುರುಗೇಶ್ ನಿರಾಣಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಲೇಬೇಕು. ನಮ್ಮ ಸಮುದಾಯದಿಂದ ಹೆಚ್ಚು ಶಾಸಕರು ಗೆದ್ದಿದ್ದಾರೆ ಹೀಗಾಗಿ ಕೇಳ್ತಿದ್ದೀವಿ. ಇದರಲ್ಲಿ ಬೇರೆ ಸಮುದಾಯಕ್ಕೆ ಅನ್ಯಾಯ ಎಲ್ಲಿ ಹೇಗೆ ಆಗುತ್ತೇ..? ಹೆಚ್ಚು ಸ್ಥಾನ ಗೆದ್ದವರಿಗೆ ಸಚಿವ ಸ್ಥಾನ ಕೊಡದಿರೋದು ಸಾಮಾಜಿಕ ನ್ಯಾಯನಾ..? ಎಂದ್ರು.
ನಾನು ಸಚಿವನಾಗಬೇಕು ಎಂದು ಶಾಸಕನಾಗಿ ಆಯ್ಕೆಯಾಗಿಲ್ಲ. ನಮ್ಮ ಪಕ್ಷದ ಮುಖಂಡರು ಹಾಗೂ ಜನಾಂಗದ ಪ್ರಮುಖರು ಯಾವ ನಿರ್ಧಾರ, ಜವಾಬ್ದಾರಿ ಕೊಟ್ಟರೂ ಅದನ್ನು ಒಪ್ಪಿಕೊಳ್ಳುತ್ತೇನೆ.
– ಮುರುಗೇಶ್ ನಿರಾಣಿ, ಶಾಸಕ
ನಾವು ಮುಖ್ಯಮಂತ್ರಿಗಳ ಮನೆಬಾಗಿಲಿಗೆ ಹೋಗಲ್ಲ, ಧರಣಿ ಮಾಡುವಷ್ಟು ಕೆಳಮಟ್ಟಕ್ಕೆ ಇಳಿಯಲ್ಲ. ಆದರೆ ಅವರೇ ನಮ್ಮ ಮಠಕ್ಕೆ ಬರುವಂತೆ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್, ಜೆಡಿಎಸ್ನಿಂದ ಬಂದು ಗೆದ್ದವರಿಗೆ ಇನ್ನೂ ಮಂತ್ರಿ ಸ್ಥಾನ ಕಲ್ಪಿಸಲು ಸಾಧ್ಯವಾಗಿಲ್ಲ. ಹೈಕಮಾಂಡ್ ಭೇಟಿ ಮಾಡೋದಕ್ಕೆ ಇನ್ನು ಸಮಯ ಕೂಡ ನಿಗದಿಯಾಗಿಲ್ಲ. ಸಚಿವ ಸ್ಥಾನಕ್ಕೆ ಘಾಟಾನು ಘಟಿಗಳೇ ಕ್ಯೂ ನಿಂತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಯನ್ನು ಯಾವ ರೀತಿ ನಿವಾರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.



