ದಾವಣಗೆರೆ; ಕಾಂಗ್ರೆಸ್ ಪಕ್ಷದದಲ್ಲಿ ಅತಿ ಹೆಚ್ಚು ವೀರಶೈವ ಲಿಂಗಾಯತ ಸಮಾಜದ ಶಾಸಕರಿದ್ದು, 67 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮಂತ್ರಿಗಳು ಹಾಗೂ ಹಾಲಿ ಶಾಸಕರು ಆಗಿರುವ ಇವರು ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಿರಿಯ ಮುತ್ಸದ್ದಿಗಳಾಗಿದ್ದು ರಾಜಕೀಯ ಅನುಭವದ ಆಧಾರದ ಮೇಲೆ ಮೊದಲ ಪ್ರಾಶಸ್ತ್ಯವನ್ನು ಶಾಮನೂರು ಶಿವಶಂಕರಪ್ಪ ಅವರಿಗೆ ನೀಡುವ ಮೂಲಕ 2023ನೇ ಸಾಲಿನಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದರು.
ಇಡೀ ರಾಜ್ಯದಲ್ಲಿ ವೀರಶೈವ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿರುವುದರಿಂದ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಲು ಡಾ ಶಾಮನೂರು ಶಿವಶಂಕರಪ್ಪನವರೇ ಕಾರಣರಾಗಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ನಾಯಕರುಗಳು ಡಾ ಶಾಮನೂರು ಶಿವಶಂಕರಪ್ಪ ಅವರ ಸೇವೆ ಪರಿಗಣಿಸಬೇಕು. ಇನ್ನು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ 39 ಶಾಸಕರು ಗೆದ್ದಿದ್ದಾರೆ. ಎಲ್ಲ ಸಮಾಜಕ್ಕಿಂತ ವೀರಶೈವ ಸಮಾಜದ ಶಾಸಕರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಒತ್ತಾಯಿಸಿದರು.
ಈ ಸಲದ ಚುನಾವಣೆಯಲ್ಲಿ ಎಲ್ಲ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ವೀರೇಂದ್ರ ಪಾಟೀಲ್ ಅವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರು ಸಿಎಂ ಆಗಿಲ್ಲ. ಹೀಗಾಗಿ ಈ ಬಾರಿ ನಮ್ಮ ಸಮಾಜದಿಂದ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ದಾವಣಗೆರೆ ಘಟಕದಿಂದ ಆಗ್ರಹಪಡಿಸುತ್ತೇವೆ. ಹಿರಿಯರಾದ ಡಾ ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ನಾವು ಆಗ್ರಹ ಪಡಿಸುತ್ತೇವೆ. ಇಲ್ಲದಿದ್ದರೆ ಉಪಮುಖ್ಯಮಂತ್ರಿ ಸ್ಥಾನವನ್ನು ಎಂ ಬಿ ಪಾಟೀಲ್ , ಎಸ್ ಎಸ್ ಮಲ್ಲಿಕಾರ್ಜುನ್ ಅಥವಾ ಈಶ್ವರ್ ಖಂಡ್ರೆ ಅವರಲ್ಲಿ ಒಬ್ಬರಿಗೆ ನೀಡಬೇಕು. ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಇವರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಉತ್ತಮ ಸ್ಥಾನ ನೀಡಬೇಕು ಎಂದರು.



